ಎಎಸ್ಪಿ ರವಿಕುಮಾರ್ ಎಸ್ಪಿಯಾಗಿ ವರ್ಗಾವಣೆ
ಬಳ್ಳಾರಿ : ನಗರದ ಬ್ಯಾನರ್ ಗಲಾಟೆಯಲ್ಲಿ ಬಿಜೆಪಿಯ ಕೇಂದ್ರ ಬಿಂದುವಾಗಿದ್ದ ಎಎಸ್ಪಿ ಕೆ.ಪಿ. ರವಿಕುಮಾರ್ ಅವರನ್ನು ರಾಜ್ಯ ಸರ್ಕಾರ ಬೆಂಗಳೂರಿನ ಗುಪ್ತಚರ ಇಲಾಖೆಯ ಎಸ್ಪಿಯಾಗಿ ಪದೋನ್ನತಿ ನೀಡಿ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.
ಬ್ಯಾನರ್ ಗಲಾಟೆಗೆ ಸಂಬಂಧಿಸಿದಂತೆ ಎಎಸ್ಪಿ ಕೆ.ಪಿ.ರವಿಕುಮಾರ್, ಡಿವೈಎಸ್ಪಿ ಚಂದ್ರಕಾಂತ ನಂದರೆಡ್ಡಿ ಅವರನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಬೇಕು ಎಂಬುದಾಗಿ ಬಿಜೆಪಿ ತೀವ್ರ ಒತ್ತಾಯ ಹೇರಿತ್ತು. ಕಳೆದ ತಿಂಗಳು ಡಿವೈಎಸ್ಪಿ ಚಂದ್ರಕಾಂತ್ ನಂದರೆಡ್ಡಿ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಇದೀಗ ಎಎಸ್ಪಿ ಕೆ.ಪಿ. ರವಿಕುಮಾರ್ ಅವರನ್ನೂ ವರ್ಗಾಯಿಸುವ ಮೂಲಕ ಪೊಲೀಸ್ ಅಧಿಕಾರಿಗಳ ಬದಲಾವಣೆಗೆ ಪಟ್ಟು ಹಿಡಿದಿದ್ದ ಬಿಜೆಪಿಯ ಹೋರಾಟ ಯಶಸ್ವಿಯಾಗಿದೆ.
ರವಿಕುಮಾರ್ ಸ್ಥಾನಕ್ಕೆ ಎಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿರುವ ನವೀನಕುಮಾರ್ ಅವರನ್ನು ಮುಂದುವರಿಸಲಾಗಿದೆ. ಬ್ಯಾನರ್ ಗಲಾಟೆ ಪ್ರಕರಣವು ಜಿಲ್ಲಾ ಪೊಲೀಸ್ ವಲಯದಲ್ಲಿ ಭಾರೀ ಬದಲಾವಣೆಗೆ ಕಾರಣವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಈವರೆಗೆ ಎಸ್ಪಿ ಪವನ್ ನಿಜ್ಜೂರ್ ಅವರನ್ನು ಕರ್ತವ್ಯ ಲೋಪದಡಿ ಅಮಾನತುಗೊಳಿಸಿತು. ಅದರಂತೆ ಡಿಐಜಿ ವರ್ತಿಕಾ ಕಟಿಯಾರ್, ಡಿವೈಎಸ್ಪಿ ಚಂದ್ರಕಾಂತ್ ನಂದರೆಡ್ಡಿ ಅವರನ್ನು ವರ್ಗಾವಣೆಗೊಳಿಸಿತ್ತು. ಆದರೆ, ಮೂವರು ಉನ್ನತ ಅಧಿಕಾರಿಗಳಿಗೆ ವರ್ಗಾವಣೆಗೆ ಆದೇಶಿಸಿದ್ದ ರಾಜ್ಯ ಸರ್ಕಾರ ಇದೀಗ ಪ್ರಕರಣದ ಕೇಂದ್ರ ಬಿಂದುವಾಗಿದ್ದ ಎಎಸ್ಪಿ ಕೆ.ಪಿ. ರವಿಕುಮಾರ್ ಅವರಿಗೆ ಬೆಂಗಳೂರಿನ ಗುಪ್ತಚರ ಇಲಾಖೆಯ ಎಸ್ಪಿಯಾಗಿ ಪದೋನ್ನತಿ ನೀಡಿ ವರ್ಗಾವಣೆ ಮಾಡಿರುವುದು ಜಿಲ್ಲಾ ರಾಜಕಾರಣ ಮತ್ತು ಪೊಲೀಸ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಒಟ್ಟಾರೆ ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ಪಟ್ಟು ಹಿಡಿದಿದ್ದ ವಿರೋಧ ಪಕ್ಷದ ಹೋರಾಟ ಯಶಸ್ವಿಯಾದಂತಾಗಿದೆ.