ಬಳ್ಳಾರಿಯ ಕನಕ ದುರ್ಗಮ್ಮ ದೇವಸ್ಥಾನದ ಸಭಾಂಗಣದಲ್ಲಿ ಆಯೋಜಿಸಿದ್ದ ಸಿಡಿಬಂಡಿ ರಥೋತ್ಸವ ಪೂರ್ವಭಾವಿ ಸಭೆಯ ಕಾರ್ಯಕ್ರಮವನ್ನು ಶಾಸಕ ನಾರಾಭರತರೆಡ್ಡಿ ಉದ್ಘಾಟಿಸಿದರು. ಎಸಿ ರಾಜೇಶ್ ಎಚ್.ಡಿ., ಪಾಲಿಕೆ ಆಯುಕ್ತ ಪಿ.ಮಂಜುನಾಥ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಎಸಿ ಎಚ್.ಸವಿತಾ, ಮೇಯರ್ ಪಿ.ಗಾದೆಪ್ಪ ಇತರರಿದ್ದರು.
ಬಳ್ಳಾರಿ : ಜಿಲ್ಲೆಯ ಆರಾಧ್ಯದೈವ ಕನಕ ದುರ್ಗಮ್ಮ ದೇವಿಯ ಸಿಡಿ ಬಂಡಿ ಮಹೋತ್ಸವ ಸಂಪ್ರದಾಯದಂತೆ ಆಚರಣೆಗೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಶಾಸಕ ನಾರಾ ಭರತರೆಡ್ಡಿ ಹೇಳಿದರು.
ನಗರದ ದೇವಸ್ಥಾನದ ಯಾತ್ರಿ ನಿವಾಸದ ಸಭಾಂಗಣದಲ್ಲಿ ಶ್ರೀಕನಕದುರ್ಗಮ್ಮ ದೇವಸ್ಥಾನದ ಸಿಡಿಬಂಡಿ ರಥೋತ್ಸವ ಅಂಗವಾಗಿ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಇದೇ ಫೆ.24 ರಂದು ನಡೆಯಲಿರುವ ಸಿಡಿಬಂಡಿ ರಥೋತ್ಸವವನ್ನು ಅಚ್ಚುಕಟ್ಟಾಗಿ-ಅದ್ದೂರಿಯಾಗಿ ಆಚರಿಸಬೇಕು. ಮಹೋತ್ಸವದಲ್ಲಿ ದೇವಸ್ಥಾನದ ಸುತ್ತಲೂ ಸುತ್ತುವ ಸಿಡಿಬಂಡಿ ರಥದಲ್ಲಿ ಸಾಕಷ್ಟು ಜನ ಹತ್ತುವುದು ಕಂಡುಬರುತ್ತಿದ್ದು, ಸುರಕ್ಷತೆಯ ದೃಷ್ಟಿಯಿಂದ ಕೆಲವರಿಗೆ ಮಾತ್ರ ಅನುಮತಿ ನೀಡಬೇಕು ಮತ್ತು ಅವರಿಗೆ ಗುರುತಿನ ಚೀಟಿ ನೀಡಬೇಕು. ಅಂದು ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಕ್ತಿ ಗಾಯನ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಬೇಕು. ಅಚ್ಚುಕಟ್ಟಾಗಿ ಆಯೋಜನೆ ಮಾಡುವ ಮೂಲಕ ಯಾವುದೇ ರೀತಿಯ ಲೋಪವಾಗದಂತೆ ನೋಡಿಕೊಳ್ಳಬೇಕು. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ತಮ್ಮ ಜವಾಬ್ದಾರಿ ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದರು.
ರಥೋತ್ಸವ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರು ಸೇರಲಿದ್ದು, ಬರುವ ಸಾರ್ವಜನಿಕರು ಮತ್ತು ಭಕ್ತಾಧಿಗಳಿಗೆ ಕುಡಿವ ನೀರಿನ ವ್ಯವಸ್ಥೆ, ಸರತಿ ಸಾಲಿನ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ ನೋಡಿಕೊಳ್ಳಬೇಕು. ನಗರದದಲ್ಲಿ ದೀಪಾಲಂಕಾರದ ವ್ಯವಸ್ಥೆ ಮಾಡಬೇಕು. ಸೂಕ್ತ ಪೊಲೀಸ್ ಬಂದೋಬಸ್ತ್ ನಿಯೋಜಿಸಬೇಕು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ವಹಿಸಿದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ರಥೋತ್ಸವ ಯಶಸ್ವಿಗೊಳಿಸಬೇಕು ಎಂದರು.
ಪಾಲಿಕೆ ಮೇಯರ್ ಪಿ.ಗಾದೆಪ್ಪ ಮಾತನಾಡಿ, ದೇವಸ್ಥಾನದ ನೈರ್ಮಲೀಕರಣಕ್ಕೆ ದೇವಸ್ಥಾನದ ಸುತ್ತಲು ಜಾತ್ರಾ ಪ್ರದೇಶವನ್ನು ನಿರಂತರ ಸ್ವಚ್ಛವಾಗಿಟ್ಟುಕೊಳ್ಳಬೇಕು. ಸಾರ್ವಜನಿಕರ ಆರೋಗ್ಯದ ವಿಚಾರಕ್ಕೆ ಸಂಬಂಧಿಸಿದಂತೆ ವೈದ್ಯಾಧಿಕಾರಿಗಳ ತಂಡ ಹಾಗೂ ಸೂಕ್ತ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಬೇಕು. ಅದರ ಜತೆಗೆ ಅಗತ್ಯ ಅಗ್ನಿಶಾಮಕದಳ ಸೇವೆ ಸಿದ್ಧವಾಗಿಟ್ಟುಕೊಳ್ಳಬೇಕು ಎಂದರು.
ಗಾಣಿಗ ಸಮುದಾಯದ ಜಿಲ್ಲಾಧ್ಯಕ್ಷ ವೆಂಕಟೇಶ್ ಪ್ರಸಾದ್ ಮಾತನಾಡಿ, ಸಾರ್ವಜನಿಕರು ಮತ್ತು ಭಕ್ತಾಧಿಗಳಿಗೆ ಸಾಲಿನಲ್ಲಿ ಬಂದು ದೇವಿಯ ದರ್ಶನ ಪಡೆಯಲು ಬ್ಯಾರಿಕೇಡ್ ವ್ಯವಸ್ಥೆ, ಸಿಡಿಬಂಡಿ ರಥೋತ್ಸವ ಸುತ್ತಲೂ ಬ್ಯಾರಿಕೇಡ್ ಅಳವಡಿಸಿ ಸೂಕ್ತ ರಕ್ಷಣೆ ಕಲ್ಪಿಸಬೇಕು ಎಂದರು.
ನಗರ ಡಿಎಸ್ಪಿ ನಂದಾರೆಡ್ಡಿ ಮಾತನಾಡಿ, ಮಹೋತ್ಸವದಲ್ಲಿ ಕಟ್ಟೆಚ್ಚರ ವಹಿಸಲು ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು. ಟ್ರಾಫಿಕ್ ನಿರ್ವಹಣೆಗಾಗಿ ದೇವಸ್ತಾನದ ಸುತ್ತ-ಮುತ್ತಲಿನ ಪ್ರಮುಖ ರಸ್ತೆಗಳ ಸೂಕ್ತ ಸ್ಥಳದಲ್ಲಿ ಅವಕಾಶ ಮಾಡಲಾಗುತ್ತದೆ ಎಂದರು.