ಹೊಸಪೇಟೆ ತಾಲೂಕಿನ ಕಮಲಾಪುರದ ಹಂಪಿ ವಿವಿ ಆವರಣದಲ್ಲಿ ತುಂಗಭದ್ರಾ ರೈತ ಸಂಘದಿಂದ ಹೂಳು ತೆಗೆಸಿಲು ಸಮಿತಿ ರಚಿಸುವಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ಅಧ್ಯಕ್ಷ ಡಾ.ಪುರುಷೋತ್ತಮಗೌಡ, ಬುಡಾ ಅಧ್ಯಕ್ಷ ಜೆ.ಎಸ್.ಆಂಜನೇಯಲು ಇತರರಿದ್ದರು.
ಬಳ್ಳಾರಿ : ತುಂಗಭದ್ರಾ ಜಲಾಶಯದಲ್ಲಿನ 33 ಟಿಎಂಸಿ ನಷ್ಟು ಹೂಳು ತೆಗೆಯಲು ತಜ್ಞರ ಸಮಿತಿ ನೇಮಿಸಬೇಕು ಎಂದು ಒತ್ತಾಯಿಸಿ, ಹೊಸಪೇಟೆ ತಾಲೂಕಿನ ಕಮಲಾಪುರದ ಹಂಪಿ ವಿವಿ ಆವರಣದಲ್ಲಿ ತುಂಗಭದ್ರಾ ರೈತ ಸಂಘದಿಂದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಡಾ.ಪುರುಷೋತ್ತಮ ಗೌಡ ಮಾತನಾಡಿ, ಜಲಾಶಯದಲ್ಲಿ ಬೃಹತ್ ಪ್ರಮಾಣದ ಹೂಳು ತುಂಬಿರುವುದರಿಂದ ನೀರಿನ ಸಂಗ್ರಹಣಾ ಸಾಮರ್ಥ್ಯ ಕುಸಿದಿದೆ. ಇದರ ನೇರ ಪರಿಣಾಮ ಬಳ್ಳಾರಿ, ವಿಜಯನಗರ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳು ಮಾತ್ರವಲ್ಲದೆ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಸುಮಾರು 16,74,000 ಎಕರೆ ಪ್ರದೇಶದ ರೈತರಿಗೆ ನೀರಾವರಿ ಸಮಸ್ಯೆಯಾಗುತ್ತಿದೆ ಎಂದರು.
ನವಿಲೆ ಜಲಾಶಯ ನಿರ್ಮಾಣಕ್ಕೆ ಅಂತರರಾಜ್ಯ ಅನುಮತಿ ಹಾಗೂ ಭೂಸ್ವಾಧೀನದ ಅಡೆತಡೆಗಳಿವೆ. ಅದರ ಬದಲಿಗೆ ಪ್ರಸ್ತುತ ಜಲಾಶಯದಲ್ಲೇ ಹೂಳು ತೆಗೆಯುವುದು ಸುಲದ ಹಾದಿಯಾಗಿದೆ. ಜಲಾಶಯದ ಹಿನ್ನೀರಿನ ಎಡ ಮತ್ತು ಬಲಾಗದ 80 ಕಿ.ಮೀ. ವ್ಯಾಪ್ತಿಯಲ್ಲಿ ಆಯಾ ಗ್ರಾಮ ಪಂಚಾಯಿತಿಗಳ ಮೂಲಕ ತಾತ್ಕಾಲಿಕ ರಸ್ತೆಗಳನ್ನು ನಿರ್ಮಿಸಬೇಕು. ಹೂಳು, ಮರಳು ಮತ್ತು ಗ್ರಾವೆಲ್ ಅನ್ನು ರೈತರೇ ತೆಗೆದುಕೊಂಡು ಹೋಗಲು ಮುಕ್ತ ಅವಕಾಶ ನೀಡಬೇಕು. ಪ್ರತಿ ವರ್ಷ ನೀರಿನ ಮಟ್ಟ ಕಡಿಮೆಯಿರುವ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಈ ಹೂಳು ಎತ್ತುವ ಪ್ರಕ್ರಿಯೆಗೆ ಚಾಲನೆ ನೀಡಬೇಕು. ಜಲಾಶಯದ ಹೂಳು ತೆರವಿನಿಂದ ಸಂಗ್ರಹಣಾ ಸಾಮರ್ಥ್ಯ ಹೆಚ್ಚುವುದಲ್ಲದೆ, ರೈತರ ಜಮೀನುಗಳಿಗೆ ಫಲವತ್ತಾದ ಮಣ್ಣು ಸಿಗಲಿದೆ. ಕರ್ನಾಟಕ, ಆಂಧ್ರ ಮತ್ತು ತೆಲಂಗಾಣ ರಾಜ್ಯಗಳ ತಜ್ಞರ ಸಭೆ ನಡೆಸಿ ಶೀಘ್ರ ನಿರ್ಧಾರ ಕೈಗೊಳ್ಳಬೇಕು ಎಂದರು.