ಬಳ್ಳಾರಿಯಲ್ಲಿ ಅಪರ ಜಿಲ್ಲಾಧಿಕಾರಿ ಮಹ್ಮದ್ ಜುಬೇರ್‌ಗೆ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಕಾರ್ಯಾಧ್ಯಕ್ಷ ಬಿ.ವಿ.ಗೌಡ, ತಾಲೂಕು ಅಧ್ಯಕ್ಷ ವಿ.ವೀರೇಶ್, ರೈತರಾದ ಸೂಗಪ್ಪ, ಬೇರ‌್ಗಿ ಮಹೇಶಗೌಡ, ಜಡೆಪ್ಪ ಇತರರಿದ್ದರು.
ಕಂಪ್ಲಿ: ಎಮ್ಮಿಗನೂರು ಗ್ರಾಮವನ್ನು ಹೋಬಳಿ ಕೇಂದ್ರವಾಗಿ ಮೇಲ್ದರ್ಜೆಗೇರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಾಧ್ಯಕ್ಷ ಬಿ.ವಿ.ಗೌಡ ಒತ್ತಾಯಿಸಿದರು.
ಬಳ್ಳಾರಿಯಲ್ಲಿ ಅಪರ ಜಿಲ್ಲಾಧಿಕಾರಿ ಮಹ್ಮದ್ ಜುಬೇರ್‌ಗೆ ಮನವಿ ಸಲ್ಲಿಸಿ ಗುರುವಾರ ಮಾತನಾಡಿದರು. ಎಮ್ಮಿಗನೂರು ಗ್ರಾಮೀಣ ಮಾರುಕಟ್ಟೆಯನ್ನು ಎಪಿಎಂಸಿ ಉಪ ಮಾರುಕಟ್ಟೆ, ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸ ಬೇಕೆಂದು ಆಗ್ರಹಿಸಿದರು.
ಎಮ್ಮಿಗನೂರು ಗ್ರಾಮದಲ್ಲಿನ ಗ್ರಾಮೀಣ ಮಾರುಕಟ್ಟೆ ನಾನಾ ಸೌಲಭ್ಯಗಳಿಂದ ವಂಚಿತವಾಗಿದೆ. ಈ ಗ್ರಾಮದಲ್ಲಿ ಶೇ.90 ಜನಸಂಖ್ಯೆ ಕೃಷಿ ಅವಲಂಬಿಸಿದ್ದು, ಎಪಿಎಂಸಿ ಉಪ ಮಾರುಕಟ್ಟೆಯ ಅಗತ್ಯವಿದೆ. ಎಮ್ಮಿಗನೂರು ಗ್ರಾಮದ ಸರ್ವೇ ನಂಬರ್ 1001 ಬಿ 2.62ಎಕರೆ ಸರ್ಕಾರಿ ಜಮೀನನ್ನು ಎಪಿಎಂಸಿ ಉಪಮಾರುಕಟ್ಟೆಗೆ ಒದಗಿಸಬೇಕು. ಇದರಿಂದ ರೈತರ ಚಟುವಟಿಕೆಗಳಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಈಗಿರುವ ಗ್ರಾಮೀಣ ಮಾರುಕಟ್ಟೆಯಲ್ಲಿನ ಬೆಳೆ ಒಣಗಿಸುವ ಕಟ್ಟೆಗಳು ಹಾಳಾಗಿದ್ದು, ಅಭಿವೃದ್ಧಿಗೊಳಿಸಬೇಕು. ಅರಣ್ಯ ಗಿಡಗಳನ್ನು ತೆರವುಗೊಳಿಸಿ ರಸ್ತೆ ನಿರ್ಮಿಸಬೇಕು. ಬೆಳೆ ಒಣಗಿಸಲು ಶೆಡ್ ವ್ಯವಸ್ಥೆ ಕಲ್ಪಿಸಬೇಕು. ಧಾನ್ಯಗಳ ಸಂಗ್ರಹಣೆಗೆ 2500 ಮೆ.ಟನ್ ಸಾಮರ್ಥ್ಯದ ಗೋದಾಮು ನಿರ್ಮಿಸಬೇಕು. ರೈತರಿಗೆ ಧಾನ್ಯಗಳ ಸಂಸ್ಕರಣ ಘಟಕ, ತೂಕದ ಯಂತ್ರ, ಶೌಚಗೃಹ, ಸಮರ್ಪಕವಾಗಿ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಒದಗಿಸಬೇಕು ಎಂದು ಒತ್ತಾಯಿಸಿದರು. ತಾಲೂಕು ಅಧ್ಯಕ್ಷ ವಿ.ವೀರೇಶ್, ರೈತರಾದ ಸೂಗಪ್ಪ, ಬೇರ‌್ಗಿ ಮಹೇಶಗೌಡ, ಜಡೆಪ್ಪ, ನಾಗರೆಡ್ಡಿ, ಜಯರಾಮರೆಡ್ಡಿ ಇತರರಿದ್ದರು.