ಬಳ್ಳಾರಿ : ಜಿಲ್ಲೆಯಲ್ಲಿ ಪಂಚಪೀಠಾಧೀಶ್ವರ ಜಗದ್ಗುರಗಳ ಯುಗಮಾನೋತ್ಸವವನ್ನು ಮಾ. 23,24,25 ರವರೆಗೆ ಆಯೋಜಿಸಲು ತಿರ್ಮಾನಿಸಲಾಗಿದೆ ಎಂದು ವೀರಶೈವ ವಿದ್ಯಾವರ್ಧಕ ಸಂಘದ ಜಿಲ್ಲಾಧ್ಯಕ್ಷ ಡಾ.ಕಣೇಕಲ್ ಮಹಾಂತೇಶ್ ಹೇಳಿದರು.
ನಗರದ ಬಸವಭವನದಲ್ಲಿ ವೀರಶೈವ ಲಿಂಗಾಯತ ಸಮಾಜದ ಮುಖಂಡರಿಂದ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ನಗರದ ಎಸ್.ಜಿ. ಕಾಲೇಜು ಆವರಣ ಅಥವಾ ಕಿತ್ತೂರು ರಾಣಿ ಚನ್ನಮ್ಮ ಶಾಲಾ ಮೈದಾನದಲ್ಲಿ ನಡೆಸಲು ಚರ್ಚಿಸಲಾಗುವುದು. ಈ ಯುಗಮಾನೋತ್ಸವದಲ್ಲಿ ವೀರಶೈವ ಪರಂಪರೆ ಬೆಳೆದು ಬಂದ ಬಗ್ಗೆ ಸಮುದಾಯಕ್ಕೆ ತಿಳಿಸುವುದು. ವೀರಶೈವ ಲಿಂಗಾಯತ ಸಮಾಜವನ್ನು ಒಗ್ಗೂಡಿಸುವ ಉದ್ದೇಶ ಹೊಂದಿದೆ ಎಂದರು.
ಮುಖಂಡ ಟೆಂಗಿನಕಾಯಿ ರಾಜಣ್ಣ ಮಾತನಾಡಿ, ಪಂಚಪೀಠಾಧೀಶ್ವರರು ಒಂದಾಗಿ ಯುಗಮಾನೋತ್ಸವ ನಡೆಯಲಿದೆ. ಮಾ.23 ರಂದು ಅಡ್ಡಪಲ್ಲಕ್ಕಿ, ಸಿದ್ದಾಂತ ಶಿಖಾಮಣಿ ಪಠಣ ಮಹಿಳೆಯರಿಂದ, ಧರ್ಮಸಭೆ ಮೊದಲಾದ ಕಾರ್ಯಕ್ರಮ ಇರಲಿವೆ. ಕಾರ್ಯಕ್ರಮಕ್ಕೆ ಮಠಾಧೀಶರು, ರಾಜಕಾರಣಿಗಳು ಸಹ ಆಗಮಿಸಲಿದ್ದಾರೆ. ಮುಂದಿನ ದಿನಗಳಲ್ಲಿ ರಂಭಾಪುರಿ ಮತ್ತು ಉಜ್ಜಯನಿ ಶ್ರೀಗಳು ಬಂದು ಸಮಾಜ ದೊಂದಿಗೆ ಮಾತನಾಡಿ ಕಾರ್ಯಕ್ರಮದ ರೂಪುರೇಷೆಗಳನ್ನು ತಿಳಿಸಲಿದ್ದಾರೆ. ವೀರಶೈವ ಅಲ್ಲದವರನ್ನು ಬಿಟ್ಟು ಬೇರೆಯವರನ್ನು ಕರೆಯಲ್ಲ ಎಂದು ಸ್ಪಷ್ಟಪಡಿಸಿದರು.
ಉಡೇದ ಬಸವರಾಜ್ ಮಾತನಾಡಿ, ನಮ್ಮ ಸಮಾಜದ ಕಾರ್ಯಕ್ರಮಗಳಲ್ಲಿ ಮಹಿಳೆಯರೇ ಹೆಚ್ಚಾಗಿ ಇರುತ್ತಾರೆ. ಆದರೆ, ಪುರುಷರು ಸಹ ಈ ಹಿಂದೆ ವೈ.ಮಹಾಬಲೇಶ್ವರಪ್ಪ ಪುತ್ಥಳಿ ಅನಾವರಣದ ಕಾರ್ಯಕ್ರಮದಲ್ಲಿ ಒಗ್ಗಟ್ಟಿನ ಪ್ರದರ್ಶನಕ್ಕೆ ಸಹಕರಿಸಿದಂತೆ ಈ ಕಾರ್ಯಕ್ರಮದಲ್ಲಿಯೂ ನೀಡಬೇಕು ಎಂದರು. ಸಭೆಯಲ್ಲಿ ಮುಖಂಡರಾದ ಅಲ್ಲಂ ಪ್ರಶಾಂತ, ದರೂರು ಸಾಗರ್‌ಗೌಡ, ಎನ್.ವೀರಭದ್ರಗೌಡ, ಪಲ್ಲೇದ ಪಂಪಾಪತಿ, ಎಚ್.ಎಂ.ಗುರುಸಿದ್ದಸ್ವಾಮಿ, ಉಡೇದ ಬಸವರಾಜ, ಡಾ.ರೇಣುಕಾ ಮಂಜುನಾಥ ಇದ್ದರು.