ಕಂಪ್ಲಿ ಉತ್ಸವದಲ್ಲಿ ತೋಟಗಾರಿಕೆ ಇಲಾಖೆಯಿಂದ ಆಯೋಜಿಸಿದ್ದ ಫಲ-ಪುಷ್ಪ ಪ್ರದರ್ಶನದಲ್ಲಿ ಪುಷ್ಪಗಳಿಂದ ಕಂಪ್ಲಿ ಕೋಟೆಯನ್ನು ನಿರ್ಮಿಸಲಾಗಿತ್ತು.
ಕಂಪ್ಲಿ: ಪಟ್ಟಣದ ಸಕ್ಕರೆ ಕಾರ್ಖಾನೆ ಪ್ರದೇಶದಲ್ಲಿ ಗಂಡುಗಲಿ ಕುಮಾರರಾಮನ ವೇದಿಕೆ ಮುಂಭಾಗದಲ್ಲಿ ತೋಟಗಾರಿಕೆ ಇಲಾಖೆಯ ಫಲ ಪುಷ್ಪ ಪ್ರದರ್ಶನ ನೋಡುಗರ ಕಣ್ಮನ ಸೆಳೆಯಿತು.
ಕಲ್ಲಂಗಡಿ ಹಣ್ಣಿನಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ತುಮಕೂರಿನ ಡಾ.ಶಿವಕುಮಾರ ಸ್ವಾಮೀಜಿ, ಗದಗಿನ ಡಾ.ಪುಟ್ಟರಾಜ ಗವಾಯಿ, ವಿಜಯಪುರದ ಸಿದ್ದೇಶ್ವರ ಸ್ವಾಮಿಗಳ ರಚನೆ, ಗಂಡುಗಲಿ ಕುಮಾರರಾಮ, ಶಿವಲಿಂಗ ಚಿತ್ರಗಳು ಆಕರ್ಷಕವಾಗಿದ್ದವು. ಬಿಳಿ ಮತ್ತು ಹಳದಿಯ ಹೂಗಳಿಂದ ನಿರ್ಮಿಸಿದ್ದ ಕಂಪ್ಲಿ ಕೋಟೆ, ಬಣ್ಣದ ಚಿಟ್ಟೆ, ಕೃತಕ ಜಲಪಾತ, ಅರಳಿ ಎಲೆಯಲ್ಲಿ ಗಣ್ಯರ ಚಿತ್ರ, ಸೆಲ್ಫಿಗಾಗಿ ನಿರ್ಮಿಸಿದ್ದ ಪುನೀತ್ ರಾಜಕುಮಾರ ಪುಷ್ಪವನ ಆಕರ್ಷಿಸಿದವು. ರಂಗೋಲಿಯಲ್ಲಿ ಸಾಲುಮರದ ತಿಮ್ಮಕ್ಕ, ಗಂಡುಗಲಿ ಕುಮಾರರಾಮ, ತೋಟಗಾರಿಕೆ ಪಿತಾಮಹಾ ಡಾ.ಎಂ.ಎಚ್.ಮರಿಗೌಡರ ಚಿತ್ರಗಳನ್ನು ರಚಿಸಲಾಗಿತ್ತು.
ಹನಿ ನೀರಾವರಿ ಮಾದರಿ, ವಾತಾವರಣ ಠಾಣೆ ಮಾದರಿ ಪ್ರದರ್ಶಿಸಲಾಯಿತು. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಜೆ.ಶಂಕರ್, ಸಹಾಯಕ ತೋಟಗಾರಿಕೆ ಅಧಿಕಾರಿ ಸುನೀಲ್ ಹಾಗೂ ಸಿಬ್ಬಂದಿ ನೋಡುಗರಿಗೆ ಮಾಹಿತಿ ನೀಡಿದರು.
ಅಂಚೆ ಸಿಬ್ಬಂದಿ ಜನಸಂಪರ್ಕ ಅಭಿಯಾನದ ಮಾಹಿತಿ, ಆರೋಗ್ಯ ಇಲಾಖೆ, ಪುರಸಭೆ ಸಿಬ್ಬಂದಿ ಇಲಾಖೆಯ ಮಾಹಿತಿ ನೀಡಿದರು. ಪುಸ್ತಕ ಓದುವ ಹವ್ಯಾಸ ಜಾಗೃತಿಗಾಗಿ ಸಾರ್ವಜನಿಕ ಗ್ರಂಥಾಲಯದಿಂದ ಪುಸ್ತಕ ಪ್ರದರ್ಶನ ಏರ್ಪಡಿಸಲಾಗಿತ್ತು. ಕಂಪ್ಲಿ ಕೈಗಾರಿಕಾ ಸಂಘದ ಪದಾಧಿಕಾರಿಗಳು ಕುಡಿವ ನೀರಿನ ವ್ಯವಸ್ಥೆ ಮಾಡಿದ್ದರು.