ಕಂಪ್ಲಿ ಪುರಸಭೆ ಬಳಿಯಿರುವ ಅಂಬೇಡ್ಕರ್ ವೃತ್ತ.
ಕಡತಗಳಲ್ಲೇ ಅಂಬೇಡ್ಕರ್ ಪುತ್ಥಳಿ ಸ್ಥಾಪನೆ
ಕಂಪ್ಲಿ: ಪಟ್ಟಣದ ಪುರಸಭೆ ಬಳಿ ಅಂಬೇಡ್ಕರ್ ವೃತ್ತ ನಿರ್ಮಿಸಿ ಪುತ್ಥಳಿ ಪ್ರತಿಷ್ಠಾಪಿಸುವಂತೆ ಕಳೆದ ನಾಲ್ಕು ದಶಕಗಳಿಂದ ಹೋರಾಟ ನಡೆದಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದ ಸ್ಪಂದನೆ ಇಲ್ಲದಂತಾಗಿದೆ.
1992ರ ಏ.10ರಂದು ಅಂಬೇಡ್ಕರ್ ವೃತ್ತ ನಾಮಕರಣಕ್ಕೆ ಪುರಸಭೆ ವಿಳಂಬ ಮಾಡಿದ್ದ ಕುರಿತು ಶಾಸಕ ರತನ್‌ಸಿಂಗ್ ವಿಷಾದ ವ್ಯಕ್ತಪಡಿಸಿ ಕೂಡಲೇ ಕ್ರಮ ಕೈಗೊಳ್ಳುವಂತೆ ಮುಖ್ಯಾಧಿಕಾರಿಗೆ ಪತ್ರ ಬರೆದಿದ್ದರು. 1992ರ ಜೂ.29ರಂದು ಜಿಲ್ಲಾಧಿಕಾರಿ ಶೇ.18 ಅನುದಾನದಲ್ಲಿ ಅಂಬೇಡ್ಕರ್ ಪುತ್ಥಳಿ ನಿರ್ಮಿಸಲು ಸೂಚಿಸಿ ಮುಖ್ಯಾಧಿಕಾರಿಗೆ ಪತ್ರ ಬರೆದಿದ್ದರು. 1993ರ ಮಾ.31ರಂದು ಡಾ.ಅಂಬೇಡ್ಕರ್ ಯುವಕ ಸಂಘದ ಮನವಿಯಂತೆ ಅಂಬೇಡ್ಕರ್ ಪ್ರತಿಮೆ ನಿರ್ಮಿಸುವಂತೆ ಸಮಾಜ ಕಲ್ಯಾಣಾಧಿಕಾರಿ ಪುರಸಭೆ ಮುಖ್ಯಾಧಿಕಾಗೆ ಪತ್ರ ಬರೆದಿದ್ದರು.
ಅಂಬೇಡ್ಕರ್ ವೃತ್ತ, ಪುತ್ಥಳಿ ನಿರ್ಮಿಸಲು ಶೇ.18 ಅನುದಾನ ಸಾಲದ ಹಿನ್ನೆಲೆಯಲ್ಲಿ ಸರ್ಕಾರದ ವಿಶೇಷ ಅನುದಾನಕ್ಕಾಗಿ ಪತ್ರ ಬರೆಯಲು 1993 ಡಿ.16ರಂದು ಪುರಸಭೆಯಲ್ಲಿ ತೀರ್ಮಾನಿಸಲಾಯಿತು. ಸುಮಾರು 7.50 ಲಕ್ಷ ರೂ. ವೆಚ್ಚದಲ್ಲಿ 2010 ಆ.15ರಂದು ಅಂಬೇಡ್ಕರ್ ವೃತ್ತವನ್ನು ಶಾಸಕ ಟಿ.ಎಚ್.ಸುರೇಶ್‌ಬಾಬು ಉದ್ಘಾಟಿಸಿದ್ದರು.
ಆದರೆ, ಪುತ್ಥಳಿ ಅಳವಡಿಕೆಯಾಗಲಿಲ್ಲ. 2023 ಆ.26ರಂದು ಗೃಹ ಸಚಿವ ಡಾ.ಜಿ.ಪರಮೇಶ್ವರ, ಬಳ್ಳಾರಿ ಡಿಸಿಗೆ ಪತ್ರ ಬರೆದು ಪುತ್ಥಳಿ ಅಳವಡಿಕೆಗೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಸೂಚಿಸಿದ್ದರು.
40 ವರ್ಷಗಳಿಂದ ಅಂಬೇಡ್ಕರ್ ಪುತ್ಥಳಿ ಸ್ಥಾಪನೆಗೆ ಹೋರಾಟ ನಡೆಯುತ್ತಿದೆ. ಡಾ.ಅಂಬೇಡ್ಕರ್ ಯುವಕ ಸಂಘ, ಪುರಸಭೆ ಮಾಜಿ ಸದಸ್ಯರಾದ ಎಂ.ಸಿ.ಮಾಯಪ್ಪ, ಸಿ.ಆರ್.ಹನುಮಂತ ಸೇರಿದಂತೆ ನಾನಾ ದಲಿತ ಪರ ಹೋರಾಟಗಾರರು ಅಂಬೇಡ್ಕರ್ ಪುತ್ಥಳಿ ಸ್ಥಾಪನೆಗೆ ನಿರಂತರವಾಗಿ ಆಗ್ರಹಿಸುತ್ತಿದ್ದರೂ ಈವರೆಗೆ ಸಾಧ್ಯವಾಗಿಲ್ಲ. 2021ರ ಆ.16ರಂದು ಅಂಬೇಡ್ಕರ್ ವೃತ್ತ ನವೀಕರಿಸುವುದಾಗಿ ಪುರಸಭೆಯಿಂದ ಠರಾವು ಪಾಸ್ ಮಾಡಲಾಗಿತ್ತು. ನವೀಕರಣ ಭಾಗ್ಯವೂ ಕೈಗೂಡಿಲ್ಲ.