ಸಂಡೂರಿನ ಪೊಲೀಸ್ ಠಾಣೆ ಮುಂಭಾಗದಲ್ಲಿ ಅಂಬೇಡ್ಕರ್ ವೃತ್ತಕ್ಕಾಗಿ ಸ್ಥಳವನ್ನು ಸಂಸದ ಈ.ತುಕಾರಾಮ್ ಪರಿಶೀಲಿಸಿದರು.  
ಬಳ್ಳಾರಿ

ಅಂಬೇಡ್ಕರ್ ವೃತ್ತ ನಿರ್ಮಾಣಕ್ಕೆ ಸ್ಥಳ ನಿಗದಿಪಡಿಸಿ

ಸಂಡೂರು: ಪಟ್ಟಣದ ಪುರಸಭೆ ಬಸ್ ನಿಲ್ದಾಣವನ್ನು ಮರು ನಿರ್ಮಾಣ ಮಾಡಲಾಗುತ್ತಿದ್ದು, ಅಲ್ಲಿ ಸ್ಥಳಾವಕಾಶ ಹೆಚ್ಚಿರುವುದರಿಂದ ಅಂಬೇಡ್ಕರ್ ವೃತ್ತ ನಿರ್ಮಿಸಿದರೆ ಅನುಕೂಲವಾಗಲಿದೆ ಎಂದು ಸಂಸದ ಈ.ತುಕಾರಾಮ್ ಹೇಳಿದರು.
ತಾಲೂಕು ಕಚೇರಿಯಲ್ಲಿ ದಲಿತ ಸಂಘಟನೆಗಳ ಪ್ರಮುಖರೊಂದಿಗೆ ವೃತ್ತ ನಿರ್ಮಾಣ ಕುರಿತು ಭಾನುವಾರ ಮಾತನಾಡಿದರು. ಪೊಲೀಸ್ ಸ್ಟೇಷನ್ ಮುಂಭಾಗದಲ್ಲಿ ವೃತ್ತ ನಿರ್ಮಿಸಿದರೆ ಮುಂದಿನ ದಿನಗಳಲ್ಲಿ ರಸ್ತೆ ವಿಸ್ತರಣೆಯಾದರೆ ವೃತ್ತವನ್ನು ಸ್ಥಳಾಂತರಿಸಬೇಕಾಗುತ್ತದೆ ಎಂದರು.
ದಲಿತ ಸಂಘಟನೆಗಳ ಪ್ರಮುಖರು ಪೊಲೀಸ್ ಸ್ಟೇಷನ್ ಮುಂಭಾಗದಲ್ಲಿಯೇ ಅಂಬೇಡ್ಕರ್ ವೃತ್ತ ನಿರ್ಮಿಸಬೇಕೆಂದು ಒತ್ತಾಯಿಸಿದರು. ಸರ್ಕಾರಿ ಜಾಗದಲ್ಲೇ ಸಮೀಕ್ಷೆ ಮಾಡಿ ವೃತ್ತ ನಿರ್ಮಾಣಕ್ಕೆ ಸ್ಥಳ ನಿಗದಿಪಡಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಿತ್ರಿಕಿ ಸತೀಶ್ ಕುಮಾರ್, ಜಿ.ಏಕಾಂಬ್ರಪ್ಪ, ತಹಸೀಲ್ದಾರ್ ಅನಿಲ್ ಕುಮಾರ್, ತಾಪಂ ಇಒ ಮಡಗಿನ ಬಸಪ್ಪ, ಸಮಾಜ ಕಲ್ಯಾಣ ಇಲಾಖೆ ಎಡಿ ಎನ್.ಕೆ.ವೆಂಕಟೇಶ್, ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಗೌಡ, ಲೋಕೋಪಯೋಗಿ ಇಲಾಖೆ ಎಇಇ ಕೊಟ್ರೇಶ್, ಸಿಪಿಐ ಮಹೇಶ್ ಗೌಡ, ಆದಿ ಜಾಂಬವ ಸಂಘದ ಅಧ್ಯಕ್ಷ ನಿಂಗಪ್ಪ ಐಹೊಳೆ, ಅಂಬೇಡ್ಕರ್ ಸಂಘದ ಅಧ್ಯಕ್ಷ ಎಂ.ಶಿವಲಿಂಗಪ್ಪ, ರಾಮಕೃಷ್ಣ ಹೆಗಡೆ, ತಾಯಪ್ಪ, ಕೆ.ದೇವದಾಸ್, ಮಲ್ಲೇಶ ಕಮ್ಮತ್ತೂರು, ಬಸವರಾಜ್ ಬ್ರೂಸ್ಲಿ ಮುಂತಾದವರಿದ್ದರು.