ಅರವಿಂದ್ 
ಬಳ್ಳಾರಿ

ಉಪನ್ಯಾಸಕರ ನಿಂದನೆ ಆರೋಪ, ವಿದ್ಯಾರ್ಥಿ ಆತ್ಮಹತ್ಯೆ

ಪ್ರಮುಖ ಮುಖ್ಯಾಂಶಗಳು

  • ಉಪನ್ಯಾಸಕ
ಬಳ್ಳಾರಿ : ನಗರದ ಖಾಸಗಿಯ ಪ್ರತಿಷ್ಠಿತ ಸಂಜಯ್ ಗಾಂಧಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಯೊಬ್ಬ ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದ್ದು, ಕಾಲೇಜು ಆಡಳಿತ ಮಂಡಳಿಯ ವಿರುದ್ಧ ವಿದ್ಯಾರ್ಥಿಗಳು ಬುಧವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿ ರೊಚ್ಚಿಗೆದ್ದಿದ್ದಾರೆ.
ಇಲ್ಲಿನ ಗುಗ್ಗರಹಟ್ಟಿ ನಿವಾಸಿ ಅರವಿಂದ್ ( 19) ಮೃತ. ಮಂಗಳವಾರ ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡುವೆ ಸಣ್ಣ ಮಟ್ಟದ ಗಲಾಟೆ ನಡೆದಿತ್ತು ಎನ್ನಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಕಾಲೇಜಿನ ಎಚ್‌ಒಡಿ ಮತ್ತು ಪ್ರೊಫೆಸರ್ ಅವರು ಅರವಿಂದ್ ಪಾಲಕರನ್ನು ಕಾಲೇಜಿಗೆ ಕರೆಸಿದ್ದರು. ಪಾಲಕರ ಸಮ್ಮುಖದಲ್ಲೇ ಅರವಿಂದ್‌ನನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದ ಉಪನ್ಯಾಸಕರು, ಹೀಗೆ ಗಲಾಟೆ ಮಾಡುವ ಹುಡುಗರನ್ನು ನಾವು ಕಾಲೇಜಿನಲ್ಲಿ ಇರಿಸಿಕೊಳ್ಳಲು ಸಾಧ್ಯವಿಲ್ಲ, ಇದು ನಿನಗೆ ಕೊನೆಯ ಎಚ್ಚರಿಕೆ ಎಂದು ಗದರಿಸಿದ್ದರು ಎನ್ನಲಾಗಿದೆ. ಇದರಿಂದ ತೀವ್ರ ಮನನೊಂದ ಅರವಿಂದ್, ಮಂಗಳವಾರ ರಾತ್ರಿ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬುಧವಾರ ಬೆಳಗ್ಗೆ ಕಾಲೇಜಿನಲ್ಲಿ ಅರವಿಂದ್‌ಗೆ ಶ್ರದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಗಿತ್ತು. ಸಭೆ ಮುಗಿಯುತ್ತಿದ್ದಂತೆ ರೊಚ್ಚಿಗೆದ್ದ ವಿದ್ಯಾರ್ಥಿಗಳು ಆಡಳಿತ ಮಂಡಳಿಯ ವಿರುದ್ಧ ಘೋಷಣೆಗಳನ್ನು ಕೂಗಲಾರಂಭಿಸಿದರು. ಕಾಲೇಜಿನ ಪ್ರಾಂಶುಪಾಲರ ಕಚೇರಿಯ ಬಾಗಿಲಿನ ಗಾಜುಗಳನ್ನು ವಿದ್ಯಾರ್ಥಿಗಳು ಪುಡಿಪುಡಿ ಮಾಡಿದ್ದಾರೆ. ಎಚ್‌ಒಡಿ ಮತ್ತು ಉಪನ್ಯಾಸಕರ ಅತಿಯಾದ ಶಿಸ್ತು ಹಾಗೂ ನಿಂದನೆಯೇ ಅರವಿಂದ್ ಸಾವಿಗೆ ನೇರ ಕಾರಣ ಎಂದು ವಿದ್ಯಾರ್ಥಿಗಳು ಗಂಭೀರ ಆರೋಪ ಮಾಡಿದ್ದಾರೆ.
ಘಟನಾ ಸ್ಥಳಕ್ಕೆ ಬ್ರೂಸ್‌ಪೇಟೆ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಭೇಟಿ ನೀಡಿ, ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಈ ಕುರಿತು ಬ್ರೂಸ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ