ಬಳ್ಳಾರಿಯ ನೂತನ ಡಿಸಿ ಕಚೇರಿ ಆವರಣದಲ್ಲಿ ಕುಡುತಿನಿ ಭೂ ಸಂತ್ರಸ್ತ ರೈತರು ಭೂ ಬೆಲೆ ನ್ಯಾಯಯುತ ಪರಿಹಾರ ನೀಡುವಂತೆ ರೈತರು ಪ್ರತಿಭಟಿಸಿದರು. ಭೂ ಸಂತ್ರಸ್ತ ರೈತರಾದ ಹೋಳಿಗೆ ಸಿದ್ದಪ್ಪ, ಅಂಜಿನಪ್ಪ, ತಿಪ್ಪೇಶ್, ಮಾರೇಶ್, ಹುಲಿಗೆಮ್ಮ, ತಾಯಮ್ಮ, ರಮೇಶ್ ಇತರರಿದ್ದರು.
ಬಳ್ಳಾರಿ : ಸಂಡೂರು ತಾಲೂಕಿನ ಕುಡುತಿನಿ ಬಳಿ ಜೆಎಸ್‌ಡಬ್ಲ್ಯೂ ಮತ್ತು ಜಪಾನ್‌ನ ಜೆಎಫ್‌ಇ ಎಲೆಕ್ಟ್ರಿಕಲ್ ಸ್ಟೀಲ್ ಲಿಮಿಟೆಡ್ ಕಂಪನಿ ಆರಂಭ ಸಂಬಂಧ ಭೂ ಸಂತ್ರಸ್ತ ರೈತರು ಮತ್ತು ಜಿಲ್ಲಾಡಳಿತದೊಂದಿಗೆ ಇಲ್ಲಿನ ಡಿಸಿ ಕಚೇರಿಯಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಕೆಐಎಡಿಬಿ ಸಿಇಒ ಡಾ.ಮಹೇಶ್ ಅವರು, ವಿಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗಿಯಾಗಿ ರೈತರ ಅಹವಾಲು ಆಲಿಸಿದರು. ಭೂ ಬೆಲೆ ತಾರತಮ್ಯಕ್ಕೆ ಸಂಬಂಧಿಸಿದಂತೆ ರೈತರ ಬಳಿಯಿರುವ ಅಗತ್ಯ ದಾಖಲೆಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವಂತೆ ಸೂಚಿಸಿದರು. ಸಲ್ಲಿಕೆಯಾದ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸುವುದಾಗಿ ಮತ್ತು ರೈತರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಸರ್ಕಾರದಿಂದ ನ್ಯಾಯಯುತ ಪರಿಹಾರ ಸಿಗುವವರೆಗೆ ಯಾವುದೇ ಕಾರಣಕ್ಕೂ ಕಂಪನಿ ಕಾಮಗಾರಿ ಆರಂಭಿಸಲು ಬಿಡುವುದಿಲ್ಲ ಎಂದು ರೈತರು ಕಠಿಣ ನಿಲುವು ಪ್ರದರ್ಶಿಸಿದರು. ರೈತರ ಆಕ್ರೋಶವನ್ನು ಗಮನಿಸಿದ ಡಿಸಿ ನಾಗೇಂದ್ರ ಪ್ರಸಾದ್ ಕೆ., ಅವರು ಮಾತನಾಡಿ, ಕಂಪನಿಯ ಈ ಯೋಜನೆ ಕಾನೂನುಬದ್ಧವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಕಾಮಗಾರಿಯನ್ನು ತಡೆಹಿಡಿದರೆ ಅದು ಕಾನೂನುಬಾಹಿರವಾಗುತ್ತದೆ. ಆದಾಗ್ಯೂ, ರೈತರ ಹಿತದೃಷ್ಟಿಯಿಂದ ಸರ್ಕಾರದ ಮುಂದಿನ ಆದೇಶ ಬರುವವರೆಗೆ ಕೆಲವು ದಿನಗಳ ಕಾಲ ಕಾಮಗಾರಿಯನ್ನು ತಡೆಹಿಡಿಯಲಾಗುವುದು. ಸರ್ಕಾರ ಈ ಕುರಿತು ಕೈಗೊಳ್ಳುವ ಅಂತಿಮ ನಿರ್ಧಾರಕ್ಕೆ ತಾವು ಬದ್ಧವಾಗಿರುವುದಾಗಿ ರೈತರಿಗೆ ಸ್ಪಷ್ಟಪಡಿಸಿದರು. ಸರ್ಕಾರದ ವರದಿಯ ನಿರೀಕ್ಷೆಯಲ್ಲಿರುವ ರೈತರು, ಮುಂದಿನ ದಿನಗಳಲ್ಲಿ ತಮ್ಮ ಬೇಡಿಕೆ ಈಡೇರದಿದ್ದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದರು. ಈ ಹಿಂದೆ ಏ.4ರಂದು ಜನಪ್ರತಿನಿಧಿಗಳ ಸಮ್ಮುಖದಲ್ಲಿ ಈ ಸಭೆ ಕರೆಯಲಾಗಿತ್ತು. ಬಾಗಲಕೋಟೆ ಹಾಗೂ ದಾವಣಗೆರೆ ಉಪಚುನಾವಣೆಯ ಹಿನ್ನೆಲೆ ಸಂಸದರು ಹಾಗೂ ಶಾಸಕರ ಗೈರು ಹಾಜರಿಯಿಂದ ಸಭೆ ರದ್ದಾಗಿತ್ತು. ಬುಧವಾರ ನಡೆದ ಸಭೆಯಲ್ಲಿ ಯಾವೊಬ್ಬ ಜನಪ್ರತಿನಿಧಿಯೂ ಭಾಗಿಯಾಗಲಿಲ್ಲ ಎಂದು ಭೂ ಸಂತ್ರಸ್ತ ರೈತರೊಬ್ಬರು ಅಕ್ರೋಶ ಹೊರ ಹಾಕಿದರು. ಸಭೆಯಲ್ಲಿ ರೈತ ಸಂಘಟನೆಯ ಪದಾಧಿಕಾರಿಗಳಾದ ಸತ್ಯಬಾಬು, ಶಿವಶಂಕರ, ಬಸವರಾಜ್, ವಿರೇಶ್, ಸಂಪತ್ ಇತರರಿದ್ದರು.