ಬಳ್ಳಾರಿಯ ಡಿಸಿ ಕಚೇರಿ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದಿಂದ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ನಡೆಯಿತು. ಸಂಘದ ಜಿಲ್ಲಾಧ್ಯಕ್ಷ ಈರಮ್ಮ, ಪದಾಧಿಕಾರಿಗಳಾದ ಎ.ಸ್ವಾಮಿ, ದುರುಗಮ್ಮ, ವೀರೇಶ, ಹುಲಿಗೆಮ್ಮ, ಮಾರೆಮ್ಮ, ತ್ರೀವೇಣಿ ಇತರರಿದ್ದರು. 
ಬಳ್ಳಾರಿ

ಬಿಮ್ಸ್ ವೈದ್ಯರ ನಿರ್ಲಕ್ಷೃ ಆರೋಪ

ಪ್ರಮುಖ ಮುಖ್ಯಾಂಶಗಳು

  • ಮಹಿಳೆಗೆ 50 ಲಕ್ಷ ಪರಿಹಾರಕ್ಕೆ ಆಗ್ರಹ
  • ವೈದ್ಯರು ತೀವ್ರ ನಿರ್ಲಕ್ಷೃ
ಬಳ್ಳಾರಿ : ಇಲ್ಲಿನ ಬಿಮ್ಸ್ ವೈದ್ಯರ ನಿರ್ಲಕ್ಷೃದಿಂದ ವಿಮುಕ್ತ ದೇವದಾಸಿ ಎಚ್.ದುರುಗಮ್ಮ ಎಂಬುವರು ತೀವ್ರ ಆರೋಗ್ಯ ಸಮಸ್ಯೆ ಒಳಗಾಗಿದ್ದಾರೆ ಎಂಬುದಾಗಿ ಆರೋಪಿಸಿ, ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದಿಂದ ಇಲ್ಲಿನ ಡಿಸಿ ಕಚೇರಿ ಮುಂಭಾಗದಲ್ಲಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ನಡೆಯಿತು.
ಸಂಘದ ಪ್ರಧಾನ ಕಾರ್ಯದರ್ಶಿ ಎ.ಸ್ವಾಮಿ ಮಾತನಾಡಿ, ಬಿಮ್ಸ್‌ನಲ್ಲಿ ಎಚ್. ದುರುಗಮ್ಮ ಅವರಿಗೆ ನಡೆಸಲಾದ ಗರ್ಭಕೋಶದ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ವೈದ್ಯರು ತೀವ್ರ ನಿರ್ಲಕ್ಷೃ ವಹಿಸಿದ್ದಾರೆ. ಮೊದಲ ಶಸ್ತ್ರಚಿಕಿತ್ಸೆಯ ವೇಳೆ ನರ ಜೋಡಣೆ ಮಾಡದ ಕಾರಣ ಮತ್ತೊಮ್ಮೆ ಆಪರೇಷನ್ ಮಾಡಬೇಕಾಯಿತು. ಈ ಸಂದರ್ಭದಲ್ಲಿ ರೋಗಿಗೆ ಯಾವುದೇ ಮಾಹಿತಿ ನೀಡದೆ ಸ್ಟಂಟ್ ಅಳವಡಿಸಲಾಗಿತ್ತು. ನಂತರದ ದಿನಗಳಲ್ಲಿ ವಿಪರೀತ ನೋವಿನಿಂದ ಬಳಲಿದ ದುರುಗಮ್ಮ ಅವರು, ವೈದ್ಯರ ಖಾಸಗಿ ಆಸ್ಪತ್ರೆಯಲ್ಲಿ ಮೂರನೇ ಬಾರಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು ಎಂದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಮ್ಸ್ ಆಡಳಿತ ಮಂಡಳಿ ನೇಮಿಸಿದ್ದ ವಿಚಾರಣಾ ಸಮಿತಿಯು ಜೂ. 22ರಂದು ನೀಡಿದ ವರದಿಯು ಸಂಪೂರ್ಣವಾಗಿ ಏಕಪಕ್ಷೀಯವಾಗಿದೆ. ರೋಗಿಯು ಆರೇಳು ತಿಂಗಳು ಅನುಭವಿಸಿದ ದೈಹಿಕ ಯಾತನೆ, ಉದ್ಯೋಗ ನಷ್ಟ ಹಾಗೂ ಸಾಲ ಮಾಡಿ ವೆಚ್ಚ ಮಾಡಿದ ಹಣದ ಬಗ್ಗೆ ವರದಿಯಲ್ಲಿ ಯಾವುದೇ ಪ್ರಸ್ತಾಪವಿಲ್ಲ. ಕರ್ತವ್ಯ ಲೋಪ ಎಸಗಿದ ವೈದ್ಯರ ನಡೆಯನ್ನು ಸಮರ್ಥಿಸಿಕೊಳ್ಳುವ ರೀತಿಯಲ್ಲಿ ಈ ವರದಿ ರೂಪುಗೊಂಡಿದ್ದು, ಇದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದರು. ಎಚ್.ದುರುಗಮ್ಮ ಸದ್ಯ ಆರ್ಥಿಕ ಸಂಕಷ್ಟಕ್ಕೆ ಈಡಾಗಿದ್ದು, ತಪ್ಪಿತಸ್ತ ವೈದ್ಯರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಹಾಗೂ ಮಹಿಳೆಗೆ 50 ಲಕ್ಷ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿದರು.