ಬಳ್ಳಾರಿಯಲ್ಲಿ ಆಯೋಜಿಸಿದ್ದ ಸಮುದಾಯ ಆಧಾರಿತ ಜಂತುಹುಳು ನಿವಾರಣಾ ಕಾರ್ಯಕ್ರಮದಲ್ಲಿ ಡಿಎಚ್‌ಒ ಡಾ. ಅಲಕಾನಂದ ಡಿ. ಮಳಗಿ ಅವರು ವಿದ್ಯಾರ್ಥಿನಿಗೆ ಅಲ್ಬೆಂಡಜೋಲ್ ಮಾತ್ರೆ ನೀಡಿದರು. ವೈದ್ಯಾಧಿಕಾರಿಗಳಾದ ಡಾ.ಎಚ್.ಹನುಮಂತಪ್ಪ, ಡಾ.ವೀರೇಂದ್ರ ಕುಮಾರ್, ಮುಖ್ಯಗುರು ಅಕ್ಕಮಹಾದೇವಿ, ಉಪನ್ಯಾಸಕ ಮಯೂರ್ ಇದ್ದರು. 
ಬಳ್ಳಾರಿ

ಸರ್ವತೋಮುಖ ಬೆಳವಣಿಗೆ ಅಗತ್ಯ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಸರ್ವತೋಮುಖ ವಿಕಾಸಕ್ಕೆ ಪೂರಕ

ಬಳ್ಳಾರಿ :

ರಕ್ತಹೀನತೆ ಆರಂಭದಲ್ಲೇ ಗುರುತಿಸುವುದರಿಂದ ಮಕ್ಕಳ ದೈಹಿಕ ಬೆಳವಣಿಗೆ ಕುಂಠಿತ ತಡೆಗಟ್ಟಿ, ಬಾಲ್ಯ ಸದೃಢಗೊಳಿಸಲು ಸಾಧ್ಯ ಎಂದು ಡಿಎಚ್‌ಒ ಡಾ. ಅಲಕಾನಂದ ಡಿ. ಮಳಗಿ ಹೇಳಿದರು.

ನಗರದ ಕಪ್ಪಗಲ್ ರಸ್ತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆರ್‌ಸಿಎಚ್ ವಿಭಾಗ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಸೋಮವಾರ ಆಯೋಜಿಸಿದ್ದ ಸಮುದಾಯ ಆಧಾರಿತ ಜಂತುಹುಳು ನಿವಾರಣಾ ಕಾರ್ಯಕ್ರಮ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆಯಾದಂತೆ ರೋಗನಿರೋಧಕ ಶಕ್ತಿಯೂ ಕುಂದುತ್ತದೆ. ಇದರಿಂದ ಸಣ್ಣಪುಟ್ಟ ಕಾಯಿಲೆಗಳೂ ದೀರ್ಘಾವಧಿಯವರೆಗೆ ಕಾಡಬಹುದು. ಮುಖ್ಯವಾಗಿ ಹೆಣ್ಣುಮಕ್ಕಳಲ್ಲಿ ರಕ್ತಹೀನತೆ ಮುಂದುವರಿದರೆ ಹದಿಹರೆಯದ ಸಮಸ್ಯೆಗಳು ಗಂಭೀರ ಸ್ವರೂಪ ಪಡೆಯುತ್ತವೆ ಎಂದರು.

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಹನುಮಂತಪ್ಪ ಮಾತನಾಡಿ, ಜಿಲ್ಲೆಯ ಗ್ರಾಮ, ನಗರ ಮತ್ತು ಪಟ್ಟಣಗಳ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಅಲ್ಬೆಂಡಜೋಲ್ ಮಾತ್ರೆ ವಿತರಿಸಲು ಕ್ರಿಯಾ ಯೋಜನೆ ರೂಪಿಸಲಾಗಿದೆ. ಸರ್ಕಾರಿ ಮತ್ತು ಖಾಸಗಿ ಶಾಲೆ, ಕಾಲೇಜುಗಳಲ್ಲಿ ನೀಡಲಾಗುತ್ತಿದ್ದು, ಮಾತ್ರೆ ಪಡೆಯಲು ಬಿಟ್ಟುಹೋದ ಮಕ್ಕಳಿಗೆ ಆ.17 ರಂದು ನೀಡಲಾಗುವುದು. ಮಕ್ಕಳಿಗೆ ಯಾವುದೇ ಕಾರಣಕ್ಕೂ ಅಲ್ಬೆಂಡಜೋಲ್ ಮಾತ್ರೆ ನುಂಗಿಸದೇ, ಚೀಪಿಸಲು ಆದ್ಯತೆ ನೀಡಬೇಕು ಎಂದು ತಿಳಿಸಿದರು.