ಕಂಪ್ಲಿ ಶ್ರೀ ರಾಮಲಿಂಗ ದೇವಸ್ಥಾನದಲ್ಲಿ ಶಿವಲಿಂಗವನ್ನು ಹೂ, ಬಿಲ್ವಪತ್ರೆಗಳನ್ನು ಇರಿಸಿ ಪೂಜೆ ಸಲ್ಲಿಸಲಾಯಿತು.  
ಬಳ್ಳಾರಿ

ಅಖಂಡ ಭಜನೆ-ಸಂಕೀರ್ತನೆ ಕಾರ್ಯಕ್ರಮ

ಅಶೋಕ್ ಕುಮಾರ್ ಎನ್
ಕಂಪ್ಲಿ: ತಾಲೂಕಿನಾದ್ಯಂತ ಮಹಾಶಿವರಾತ್ರಿಯನ್ನು ಭಾನುವಾರ ಸಂಭ್ರಮದಿಂದ ಆಚರಿಸಲಾಯಿತು. ಪಟ್ಟಣದ ಕೋಟೆ ಪ್ರದೇಶದ ಬಳಿ ತುಂಗಭದ್ರಾ ನದಿಯಲ್ಲಿ ಜನರು ಪುಣ್ಯಸ್ನಾನ ಮಾಡಿದರು.
ಪಟ್ಟಣದ ಕೋಟೆ ಪ್ರದೇಶದ ಐತಿಹಾಸಿಕ ಪಂಪಾಪತಿ, ಮಡ್ಡಿಕಟ್ಟೆಯ ಉಳ್ಳಿ ಬಸಪ್ಪ, ದೇವಾಂಗಪೇಟೆಯ ರಾಮಲಿಂಗ ಚೌಡೇಶ್ವರಿ, ಜಡೇಶಂಕರಲಿಂಗ, ರಾಮಲಿಂಗ, ನಗರೇಶ್ವರ, ನೀಲಕಂಠೇಶ್ವರ, ಎಸ್.ಎನ್.ಪೇಟೆಯ ಮಲ್ಲಿಕಾರ್ಜುನ, ಅದ್ದಪ್ಪ ಬೀರಪ್ಪ, ಫ್ಯಾಕ್ಟ್ರಿ ಮುಕ್ತಿನಾಥೇಶ್ವರ, ಸತ್ಯನಾರಾಯಣಪೇಟೆಯ ನರ್ಮದೇಶ್ವರ ಮೊದಲಾದ ಶಿವನ ಮಂದಿರಗಳಲ್ಲಿ ರುದ್ರಾಭಿಷೇಕ ನಾನಾ ಪೂಜಾ ಕಾರ್ಯಕ್ರಮಗಳು ನಡೆದವು. ಸಂಜೆ ಶಿವಲಿಂಗವನ್ನು ರಜತ ಕವಚ ಹಾಗೂ ಬಿಲ್ವಪತ್ರೆ ಹಾರಗಳಿಂದ ಅಲಂಕರಿಸಲಾಗಿತ್ತು. ಭಕ್ತರು ಉತ್ತರಾಣಿ ಕಡ್ಡಿ ಬತ್ತಿ ಬೆಳಗಿಸಿ ವಿಶೇಷ ಪೂಜೆ ಸಲ್ಲಿಸಿದರು.
ಶಿವರಾತ್ರಿ ಪ್ರಯುಕ್ತ ಹೂ, ಹಣ್ಣು, ಪೂಜಾ ಸಾಮಗ್ರಿ ಖರೀದಿಸಿದರು. ಉಪವಾಸ ಹಿನ್ನೆಲೆಯಲ್ಲಿ ಜನರು ನಿಮಿತ್ತ ಮಂಡಾಳು, ಬಾಳೆಹಣ್ಣು, ಕಲ್ಲಂಗಡಿ, ಕರಬೂಜ, ಖರ್ಜೂರ, ಕಲ್ಲುಸಕ್ಕರೆ ಇತ್ಯಾದಿ ಖರೀದಿಸಿದರು. ಶಿವನ ದೇವಸ್ಥಾನಗಳನ್ನು ಬಣ್ಣದ ವಿದ್ಯುತ್‌ದೀಪ, ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ದೇವಸ್ಥಾನಗಳಲ್ಲಿ ಅಖಂಡ ಶಿವಭಜನೆ, ಶಿವಸಂಕೀರ್ತನೆ ನಡೆದವು.