ಕೂಡ್ಲಿಗಿ ಶ್ರೀಮತಿ ಅಂಗಡಿ ವೀರಮ್ಮ, ತಿರುಕಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಾದಕ ವ್ಯಸನ ಮತ್ತು ಹಳ್ಳ ಸಾಗಾಣಿಕೆ ವಿರೋಧಿ ದಿನ ಕಾರ್ಯಕ್ರಮದಲ್ಲಿ ಎಸ್ಪಿ ಎಸ್.ಜಾಹ್ನಾವಿ ಪೋಸ್ಟರ್ ಬಿಡುಗಡೆ ಮಾಡಿದರು. ಶಾಸಕ ಡಾ.ಎನ್.ಟಿ.ಶ್ರೀನಿವಾಸ್, ತಾಪಂ ಇಒ ನರಸಪ್ಪ, ತಹಸೀಲ್ದಾರ್ ವಿ.ಕೆ.ನೇತ್ರಾವತಿ, ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಇದ್ದರು.
- ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ ಎಚ್ಚರಿಕೆ
- ಅಂತಾರಾಷ್ಟ್ರೀಯ ಮಾದಕ ವ್ಯಸನ ಮತ್ತು ಕಳ್ಳಸಾಗಾಣೆ ವಿರೋಧಿ ದಿನ
ಕೂಡ್ಲಿಗಿ: ಅಂತಾರಾಷ್ಟ್ರೀಯ ಮಾದಕ ವ್ಯಸನ ಮತ್ತು ಕಳ್ಳ ಸಾಗಾಣಿಕೆ ಜಾಗತಿಕ ಸಮಾಜವನ್ನು ಕಾಡುತ್ತಿರುವ ಗಂಭೀರ ಪಿಡುಗು ಆಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ ಹೇಳಿದರು.
ಶ್ರೀಮತಿ ಅಂಗಡಿ ವೀರಮ್ಮ, ತಿರುಕಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪೊಲೀಸ್ ಇಲಾಖೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಾದಕ ವ್ಯಸನ ಮತ್ತು ಕಳ್ಳಸಾಗಾಣೆ ವಿರೋಧಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾದಕ ವ್ಯಸನದ ವಿರುದ್ಧ ಸಾರ್ವಜನಿಕರು, ವಿಶೇಷವಾಗಿ ಪಾಲಕರು ಹಾಗೂ ಶಿಕ್ಷಣ ಸಂಸ್ಥೆಗಳು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಬೇಕು. ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಡ್ರಗ್ಸ್ ಸೇವನೆಯಿಂದ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತದೆ. ರಾಷ್ಟ್ರೀಯ ಭದ್ರತೆಗೂ ಸವಾಲಾಗಿದೆ ಎಂದರು.
ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಮಾತನಾಡಿ, ಹದಿಹರೆಯದ ವಯಸ್ಸಿನಲ್ಲಿ ಯುವಕರು ಡ್ರಗ್ಸ್ ಜಾಲಕ್ಕೆ ಸಿಲುಕಿ ಹಾಳಾಗುತ್ತಿರುವುದು ಕಳವಳಕಾರಿ ಸಂಗತಿ.
ಹಣದ ಆಸೆ-ಆಮಿಷಕ್ಕೆ ಯುವ ಸಮೂಹ ಒಳಗಾಗಬಾರದು. ಮಾದಕ ವ್ಯಸನದಿಂದ ಇಡೀ ಕುಟುಂಬದ ನೆಮ್ಮದಿ ಕೆಡುವುದರ ಜತೆ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ. ಹಣದ ಆಸೆಗೆ ಮಾದಕ ವಸ್ತುಗಳನ್ನು ಶಾಲಾ-ಕಾಲೇಜುಗಳಲ್ಲಿ ಮಾರಾಟ, ಕಳ್ಳಸಾಗಣೆ ಮಾಡುತ್ತಿದ್ದಾರೆ. ಆದ್ದರಿಂದ ಯುವ ಶಕ್ತಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ತಿಳಿಸಿದರು.
ತಾಪಂ ಇಒ ನರಸಪ್ಪ, ತಹಸೀಲ್ದಾರ್ ವಿ.ಕೆ.ನೇತ್ರಾವತಿ, ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ, ಟಿಎಚ್‌ಒ ಡಾ.ಎಸ್.ಪಿ.ಪ್ರದೀಪ್, ಬಿಇಒ ಮೈಲೇಶ್ ಬೇವೂರು, ಸಿಪಿಐ ಪ್ರಲ್ಹಾದ್ ಚನ್ನಗಿರಿ, ಪಿಎಸ್‌ಐ ಪ್ರಕಾಶ್, ಪ್ರಾಚಾರ್ಯ ಷಣ್ಮುಖನ ಗೌಡ ಸಂಕಾಳ್ ಇತರರಿದ್ದರು.