ಬಳ್ಳಾರಿಯ ಬಲಿಜ ಭವನದಲ್ಲಿ ಆಯೋಜಿಸಿದ್ದ ಯೋಗಿ ನಾರೇಯಣ ಯತೀಂದ್ರ ಶ್ರೀಕೈವಾರ ತಾತಯ್ಯ ಜಯಂತಿ ಕಾರ್ಯಕ್ರಮವನ್ನು ಮೇಯರ್ ಪಿ.ಗಾದೆಪ್ಪ ಉದ್ಘಾಟಿಸಿದರು. ನಿ.ಶಿಕ್ಷಕ ಕೆ.ಬಿ.ಸಿದ್ದಲಿಂಗಪ್ಪ, ಬಲಿಜ ಸಂಘದ ಜಿಲ್ಲಾಧ್ಯಕ್ಷ ಕೆ.ರಮೇಶ್ ಬುಜ್ಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ್ ಇತರರಿದ್ದರು. ==
ಬಳ್ಳಾರಿ : ವಿಶ್ವಮಾನವ ಸಂದೇಶ ಸಾರಿದ ನಾರೇಯಣ ಯತೀಂದ್ರ ಅವರ ಜಯಂತಿ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದ್ದು, ಮಹಾನ್ ನಾಯಕರ ಆದರ್ಶ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪಾಲಿಕೆ ಮೇಯರ್ ಪಿ.ಗಾದೆಪ್ಪ ಹೇಳಿದರು.
ನಗರದ ಬಲಿಜ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಆಯೋಜಿಸಿದ್ದ ಯೋಗಿ ನಾರೇಯಣ ಯತೀಂದ್ರ ಶ್ರೀಕೈವಾರ ತಾತಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈಗಿನ ಯುವಪೀಳಿಗೆಯು ಗುಣಮಟ್ಟದ ಶಿಕ್ಷಣ ಪಡೆದುಕೊಳ್ಳಬೇಕು. ಶಿಕ್ಷಣ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ಮಾತ್ರ ಮುಂಚೂಣಿಗೆ ಬರಲು ಸಾಧ್ಯ ಎಂದರು
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಕೆ.ಇ.ಚಿದಾನಂದಪ್ಪ ಮಾತನಾಡಿ, ಬಲಿಜ ಜನಾಂಗದವರು ಸಮಾಜದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ದಾನ-ಧರ್ಮಕ್ಕೆ ಆದ್ಯತೆ ನೀಡುವವರಾಗಿದ್ದಾರೆ. ಇನ್ನೂ ಹೆಚ್ಚಿನ ಶಿಕ್ಷಣ ಮತ್ತು ಉದ್ಯೋಗ ಅವಕಾಶಗಳನ್ನು ಪಡೆದುಕೊಳ್ಳುವ ಮೂಲಕ ಅಭಿವೃದ್ಧಿ ಹೊಂದಬೇಕು ಎಂದು ಆಶಿಸಿದರು.
ಜಯಂತಿ ಅಂಗವಾಗಿ ನಗರದಲ್ಲಿ ಅದ್ದೂರಿ ಮೆರವಣಿಗೆ ನಡೆಯಿತು. ವಿವಿಧ ಸಾಂಸ್ಕೃತಿಕ ಕಲಾತಂಡಗಳನ್ನೊಂಡು ಮೆರವಣಿಗೆಯು ಬಲಿಜ ಭವನದಿಂದ ಆರಂಭವಾಗಿ ಗಡಗಿ ಚೆನ್ನಪ್ಪ ವೃತ್ತ- ಮೀನಾಕ್ಷಿ ವೃತ್ತ- ಮರಳಿ ಬಲಿಜ ಭವನದ ವರೆಗೆ ಸಾಗಿ ಬಂದಿತು.