ಬಳ್ಳಾರಿ ಗಡಿಯ ಅಂತರಗಂಗಮ್ಮ ಗುಡ್ಡದಲ್ಲಿ ಡ್ರೋನ್ ಮೂಲಕ ಸರ್ವೇ ನಡೆದಿರುವುದು.
- ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮೀಕ್ಷೆ
- 68.50 ಹೆಕ್ಟೇರ್ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ಆರೋಪ
- ಅಧಿಕಾರಿಗಳ ತಂಡ ಭೇಟಿ
ಬಳ್ಳಾರಿ: ಆಂಧ್ರದ ರಾಯದುರ್ಗ ತಾಲೂಕಿನ ಮಲಪನಗುಡಿ ಅಂತರಗಂಗಮ್ಮ ಗುಡ್ಡದ 68.50 ಹೆಕ್ಟೇರ್ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ಆರೋಪದಡಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿಯು ಸೋಮವಾರ ಡ್ರೋನ್ ಮೂಲಕ ಸರ್ವೇ ನಡೆಸಿತು.
ನಿವೃತ್ತ ನ್ಯಾಯಾಧೀಶ ಸುಧಾಂಶ ದುಲಿಯಾ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದೆ. ಡಿಎಫ್‌ಒ ಗುರು ಪ್ರಭಾಕರ, ಭೂ ಗರ್ಭ ಶಾಖಾ ಡೆಪ್ಯೂಟಿ ಡೈರಕ್ಟರ್ ಶ್ರೀನಿವಾಸ ಚೌಧರಿ, ಭೂ ಇಲಾಖೆಯ ಆರ್.ಜೆ.ಡಿ. ವೆಂಕಟೇಶ್ವರರಾವ್, ಸರ್ವೇ ಆಫ್ ಲ್ಯಾಂಡ್‌ನ ಡಿ.ಡಿ. ವೈ.ಜಯರಾಜ್ ನೇತೃತ್ವದಲ್ಲಿ ಅಧಿಕಾರಿಗಳು ಡ್ರೋನ್ ಕ್ಯಾಮರಾ ಬಳಸಿ ಸರ್ವೇ ನಡೆಸಿದರು.
ಮಲಪನಗುಡಿ ಗ್ರಾಮದ ಗಡಿಯಲ್ಲಿನ ಅಂತರಗಂಗಮ್ಮ ಹೆಸರಿನ 68.50 ಹೆಕ್ಟೇರ್ ಪ್ರದೇಶದಲ್ಲಿ ಸರ್ವೇ ನಡೆದಿದೆ. ನಂತರ ಹಂತಹಂತವಾಗಿ ಸಿದ್ದಾಪುರದಲ್ಲಿನ ಬಿಐಒಪಿ ಕಂಪನಿಯ 27.12 ಹೆಕ್ಟೇರ್, ವೈ. ಮಹಾಬಲೇಶ್ವರಪ್ಪ ಸನ್ಸ್ ಹೆಸರಿನ 20.24 ಹೆಕ್ಟೇರ್, ಒಬಳಾಪುರಂ ಗ್ರಾಮದಲ್ಲಿನ ಒಎಂಸಿ 1 ಹೆಸರಿನ 25.98 ಹೆಕ್ಟೇರ್, ಒಎಂಸಿ 2 ಹೆಸರಿನ 39.50 ಹೆಕ್ಟೇರ್ ಪ್ರದೇಶದಲ್ಲಿ ಗಣಿ ಗುತ್ತಿಗೆ ಪಡೆಯಲಾಗಿದ್ದು, ಅಲ್ಲಿಯೂ ಸರ್ವೇ ನಡೆಯಲಿದೆ.
ಶಾಸಕ ಜಿ.ಜನಾರ್ದನರೆಡ್ಡಿ ಒಡೆತನದ ಒಎಂಸಿ ಕಂಪನಿ
ಆಂಧ್ರದ ಮಲಪನಗುಡಿ ಅಂತರಗಂಗಮ್ಮ ಕೊಂಡದಲ್ಲಿ 68.50 ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುತ್ತಿದ್ದ ಶಾಸಕ ಜಿ.ಜನಾರ್ದನರೆಡ್ಡಿ ಒಡೆತನದ ಒಎಂಸಿ ಕಂಪನಿಯು ಕರ್ನಾಟಕ ಮತ್ತು ಆಂಧ್ರಪ್ರದೇಶದ ನಡುವಿನ ಅಂತಾರಾಜ್ಯ ಗಡಿಯನ್ನು ನಾಶಪಡಿಸಿದೆ.
28.90 ಲಕ್ಷ ಟನ್ ಅದಿರನ್ನು ಹೊರತೆಗೆದು ಅಕ್ರಮ
ಬಳ್ಳಾರಿ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ 28.90 ಲಕ್ಷ ಟನ್ ಅದಿರನ್ನು ಹೊರತೆಗೆದು ಅಕ್ರಮವಾಗಿ ಸಾಗಿಸಿದೆ ಎಂಬುದಾಗಿ ಸಾಬೀತಾಗಿ, ಸಿಬಿಐ ವಿಚಾರಣಾಧೀನ ನ್ಯಾಯಾಲಯ ರೆಡ್ಡಿಗೆ ಶಿಕ್ಷೆ ಪ್ರಕಟಿಸಿತ್ತು. ಆದರೆ, ಅಮಿಕ್ಯೂಸ್ ಕ್ಯೂರಿ ಹಾಗೂ ಆಂಧ್ರದ ಸಮ್ಮಿರೆಡ್ಡಿ ಸಮಿತಿ ನೀಡಿದ ವರದಿ ಅನ್ವಯ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಸುಧಾಂಶ ದುಲಿಯಾ ನೇತೃತ್ವದ ಸಮಿತಿ ರಚಿಸಿ, ಮೂರು ತಿಂಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಿ ಜನವರಿ ತಿಂಗಳಿಗೆ ವಿಚಾರಣೆ ಮುಂದೂಡಲಾಗಿತ್ತು.