ಬ್ಯಾನರ್ ಗಲಾಟೆ ಸಿಐಡಿ ತನಿಖೆ ಚುರುಕು 
ಬಳ್ಳಾರಿ

ಬ್ಯಾನರ್ ಗಲಾಟೆ ಸಿಐಡಿ ತನಿಖೆ ಚುರುಕು

ಪ್ರಮುಖ ಮುಖ್ಯಾಂಶಗಳು

  • ತನಿಖೆ
ಬಳ್ಳಾರಿ : ನಗರದಲ್ಲಿ ಜನವರಿ 1ರಂದು ವಾಲ್ಮೀಕಿ ಪುತ್ಥಳಿ ಅನಾವರಣ ಸಂಬಂಧ ನಡೆದ ಬ್ಯಾನರ್ ಗಲಾಟೆ ಹಾಗೂ ಫೈರಿಂಗ್ ಪ್ರಕರಣಕ್ಕೆ ಸಂಬ ಂಧ ಕಳೆದ ಮೂರು ತಿಂಗಳಿನಿಂದ ಮಂದಗತಿಯಲ್ಲಿದ್ದ ತನಿಖೆಗೆ ಈಗ ಸಿಐಡಿ ಚುರುಕು ನೀಡಿದೆ.
ಇಲ್ಲಿನ ಅತಿಥಿ ಗೃಹದ ಕಚೇರಿಯಲ್ಲಿ ಸಿಐಡಿ ಡಿವೈಎಸ್ಪಿ ಅಂಜನ್ ಕುಮಾರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಪ್ರಕರಣದ ಆರೋಪಿಗಳನ್ನು ಕರೆಸಿ ವಿಚಾರಣೆ ನಡೆಸಿದೆ. ಈ ಹಿಂದೆ ಬೆಂಗಳೂರಿನ ಕಚೇರಿಗೆ ಹಾಜರಾಗುವಂತೆ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹಾಗೂ ಬಿಜೆಪಿ ಬೆಂಬಲಿತ ಆರೋಪಿಗಳಿಗೆ ನೋಟೀಸ್ ನೀಡಲಾಗಿತ್ತು. ಕೆಲವು ಮುಖಂಡರು ಬೆಂಗಳೂರಿಗೆ ತೆರಳಿ ಹೇಳಿಕೆ ನೀಡಿದ್ದರು. ಆದರೆ, ಅಂದು ಹಾಜರಾಗದವರನ್ನು ಸದ್ಯ ನಗರದಲ್ಲಿ ಏ.28ರಿಂದ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಲಾಗುತ್ತಿದೆ.
ನಗರ ಶಾಸಕ ಭರತ್ ರೆಡ್ಡಿ ಬೆಂಬಲಿತ 20ಕ್ಕೂ ಹೆಚ್ಚು ಕಾಂಗ್ರೆಸ್ ಮುಖಂಡರಿಗೆ ಮೇ 11ರಂದು ಬೆಂಗಳೂರಿನ ಸಿಐಡಿ ಕಚೇರಿಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಗುರುತಿಸಲಾದ ಎಲ್ಲ ಆರೋಪಿಗಳನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದೆ. ವಿಚಾರಣೆ ಮುಗಿದ ನಂತರ ಎಲ್ಲರೂ ನ್ಯಾಯಾಲಯಕ್ಕೆ ಹಾಜರಾಗಬೇಕಾಗುತ್ತದೆ ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ತನಿಖೆ ಅಂತಿಮ ಘಟ್ಟ ತಲುಪಿದ್ದು, ಸಿಐಡಿ ತಂಡವು ಶೀಘ್ರದಲ್ಲೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲು ಸಿದ್ಧತೆ ನಡೆಸಿದೆ. ಈ ತನಿಖೆಯ ಸಂದರ್ಭದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲವು ಪ್ರಭಾವಿ ವ್ಯಕ್ತಿಗಳ ಹೆಸರುಗಳು ಹೊರ ಬರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿದವು.
==