ದುರ್ಗತಿಗೆ ತಲುಪಿದ ಪ್ರವಾಸಿ ಕೆರೆ
ಬಳ್ಳಾರಿ : ಇಲ್ಲಿನ ಜಿಲ್ಲಾ ಕ್ರೀಡಾಂಗಣದ ಬಳಿಯಲ್ಲಿರುವ ಜನಸಾಮಾನ್ಯರಿಗೆ ನೆಮ್ಮದಿ ನೀಡಬೇಕಿದ್ದ ಪ್ರವಾಸಿ ಕೆರೆ ದುರ್ಗತಿಗೆ ತಲುಪಿದೆ. ಸೌಂದರ್ಯೀಕರಣದ ಹೆಸರಿನಲ್ಲಿ ನಡೆದ ಕಾಮಗಾರಿಗಳು ಅರ್ಧಕ್ಕೆ ನಿಂತು ಸ್ಥಗಿತಗೊಂಡಿವೆ. ಉದ್ಘಾಟನೆಗೊಂಡು ಎರಡು ವರ್ಷ ಕಳೆಯುವ ಮುನ್ನವೇ ಹಾಳಾಗಿದೆ.
ಕಳೆದ ಕೆಲ ವರ್ಷಗಳ ಹಿಂದೆ ಹದಿಮೂರು ಎಕರೆ ವಿಸ್ತೀರ್ಣದಲ್ಲಿ ಜಾಲಿ ಬೇಲಿ, ಕುಡುಕರ ಅಡ್ಡೆ, ಕಸದ ರಾಶಿಯಿಂದ ತುಂಬಿ ರಾರಾಜಿಸುತ್ತಿದ್ದ ಪ್ರದೇಶವನ್ನು ಕಳೆದ ಮೂರು ವರ್ಷಗಳ ಹಿಂದೆ ಜಿಲ್ಲೆಯ ಖನಿಜ ಪ್ರತಿಷ್ಠಾನ(ಡಿಎಂಎಫ್) ಅನುದಾಡಿ 1.85 ಕೋಟಿ ರೂ. ವೆಚ್ಚದಲ್ಲಿ ನಿರ್ಮಿತಿ ಕೇಂದ್ರವೂ ಪ್ರವಾಸಿ ಕೆರೆ ನಿರ್ಮಿಸಲಾಗಿತ್ತು. ಆದರೆ, ಸದ್ಯ ಕೆರೆಯ ಸುತ್ತಲೂ ಸಂಚರಿಸಿದರೆ ಅಭಿವೃದ್ಧಿಯೇ ಬದಲು ಅವ್ಯವಸ್ಥೆಯೇ ಎದ್ದು ಕಾಣುತ್ತಿದೆ. ಕೆರೆಯ ಸೌಂದರ್ಯ ಹೆಚ್ಚಿಸಬೇಕಿದ್ದ ಲೈಟಿಂಗ್ ವ್ಯವಸ್ಥೆ ಹಾಗೂ ಹಸಿವು ನೀಗಿಸಬೇಕಿದ್ದ ಫುಡ್ ಕೋಟ್ ನಿರ್ಮಾಣ ಹಂತದಲ್ಲಿರುವಾಗಲೇ ಹಾಳಾಗಿವೆ. ವಾಯು ವಿಹಾರಕ್ಕೆಂದು ನಿರ್ಮಿಸಲಾದ ಪಾದಚಾರಿ ರಸ್ತೆಗಳು ಅಲ್ಲಲ್ಲಿ ಕುಸಿದಿದ್ದು, ಬೇಲಿ ಬೆಳೆದು ರಸ್ತೆಯ ತುಂಬೆಲ್ಲ ಕಸ ಹರಡಿರುವುದಿಂದ ಸಂಚರಿಸಲು ಅಪಾಯಕಾರಿಯಾಗಿವೆ. ಕೆರೆಯ ಸುತ್ತಲೂ ಹಸಿರಿನಿಂದ ಕಂಗೊಳಿಸಬೇಕಿದ್ದ ಉದ್ಯಾನವನವು ನಿರ್ವಹಣೆಯಿಲ್ಲದೆ ಒಣಗಿ ಹೋಗಿದ್ದು, ಕಳೆ ಗಿಡಗಳ ತಾಣವಾಗಿದೆ. ಕೆರೆ ಉದ್ಘಾಟನೆಯಾದ ವೇಳೆ ಪ್ರವಾಸಿಗರ ಹೆಚ್ಚಳಕ್ಕಾಗಿ ಬೋಟಿಂಗ್ ವ್ಯವಸ್ಥೆಗಾಗಿ ಬೋಟ್ ಕಲ್ಪಿಸಲಾಗಿತ್ತು. ದಿನೇದಿನೆ ಕೆರೆ ವೀಕ್ಷಣೆಗೆ ಜನರ ಸಂಖ್ಯೆ ತಗ್ಗುತ್ತಿದ್ದಂತೆ ನೀರಿನಲ್ಲಿಯೇ ಬೋಟ್ ಕೆಟ್ಟು ನಿಂತು ತುಕ್ಕು ಹಿಡಿಯುತ್ತಿದೆ.
ಕಳೆದ ಎರಡು-ಮೂರು ವರ್ಷಗಳಿಂದ ಕೆರೆಯ ನೀರು ಹೊರ ಹರಿಸದ ಹಾಗೂ ಶುದ್ಧೀಕರಿಸದ ಕಾರಣ ಇಡೀ ಕೆರೆ ನೀರು ಹಸಿರು ಬಣ್ಣಕ್ಕೆ ತಿರುಗಿದೆ. ಇದರಿಂದ ದುರ್ನಾತ ಬೀರುತ್ತಿದ್ದು, ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಸುತ್ತಮುತ್ತಲಿನ ಪರಿಸರವು ಪ್ರೇಕ್ಷಣೀಯ ಸ್ಥಳ ಎಂಬ ಬದಲು ಅಶುಚಿತ್ವದ ಕೇಂದ್ರವಾಗಿ ಮಾರ್ಪಟ್ಟಿದೆ.
ಯೋಜನೆಯ ಪ್ರಕಾರ ಇಲ್ಲಿ ಪ್ರವೇಶದ್ವಾರ, ಆಸನಗಳು, ರಕ್ಷಣಾ ಗೋಡೆ, ಲ್ಯಾಂಡ್ ಸ್ಕೇಪಿಂಗ್, ಸಿಸಿಟಿವಿ ಕ್ಯಾಮೆರಾ ಹಾಗೂ ಸುಸಜ್ಜಿತ ವಿದ್ಯುತ್ ದೀಪಗಳನ್ನು ಅಳವಡಿಸಬೇಕಿತ್ತು. ಆದರೆ, ಇವುಗಳಲ್ಲಿ ಯಾವುದು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ. ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಬಳ್ಳಾರಿ ನಗರದ ಜನತೆ ಸಂಜೆ ವೇಳೆಯಲ್ಲಿ ಕಾಲ ಕಳೆಯಲು ಉತ್ತಮ ಜಾಗವಿಲ್ಲದೆ ಪರದಾಡುವಂತಾಗಿದೆ. ನಗರದಲ್ಲಿ ಇರುವ ಒಂದೇ ಒಂದು ಪ್ರವಾಸಿ ಕೆರೆಯನ್ನು ಕಾಪಾಡಿಕೊಳ್ಳಲು ಜಿಲ್ಲಾಡಳಿತಕ್ಕೆ ಸಾಧ್ಯವಾಗುತ್ತಿಲ್ಲವೇ?. ಕೋಟ್ಯಾಂತರ ರೂಪಾಯಿ ತೆರಿಗೆ ಹಣ ವ್ಯರ್ಥವಾಗುತ್ತಿದೆ. ಕೂಡಲೇ ಕೆರೆ ಹೂಳೆತ್ತಿ, ಶುದ್ಧ ನೀರು ತುಂಬಿಸಿ, ಸ್ಥಗಿತಗೊಂಡ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಬಾಕ್ಸ್ : ಸದ್ಯ ಪ್ರವಾಸಿ ಕೆರೆಯ ಸುತ್ತಲೂ ಹಾಕಿ ಕೋಟ್, ಜಿಲ್ಲಾ ಕ್ರೀಡಾಂಗಣ, ಬ್ಯಾಡ್ಮಿಂಟನ್ ಕೋಟ್, ವಿಜ್ಞಾನ ಕೇಂದ್ರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಾಲ್ಮೀಕಿ ಭವನವಿದೆ. ಸಾರ್ವಜನಿಕರು ಕ್ರೀಡಾಂಗಣದಲ್ಲಿ ವಾಕಿಂಗ್, ವಾಲ್ಮೀಕಿ ಭವನದಲ್ಲಿ ಕಾರ್ಯಕ್ರಮಕ್ಕಾಗಿ, ವಿಜ್ಞಾನ ಕೇಂದ್ರಕ್ಕೆ ಮಕ್ಕಳ ವೀಕ್ಷಣೆ ಸೇರಿದಂತೆ ನಾನಾ ಚಟುವಟಿಕೆಗಳಿಗಾಗಿ ನಿತ್ಯವೂ ಜನರು ಭೇಟಿ ನೀಡಲಿದ್ದಾರೆ. ಸಮೀಪದಲ್ಲಿರುವ ಕೆರೆ ವೀಕ್ಷಣೆಗೆ ತೆರಳುವವರಿಗೆ ಪ್ರವಾಸಿ ಕೆರೆಯ ಅವ್ಯವಸ್ಥೆಯೇ ಕಂಡು ಅಧಿಕಾರಿಗಳ ವಿರುದ್ಧ ಹಿಡಿ ಶಾಪಹಾಕುತ್ತಿದ್ದಾರೆ. ಅಲ್ಲದೆ, ನಗರದಲ್ಲಿರುವ ಏಕೈಕ ಪ್ರವಾಸಿ ಕೆರೆ ಹಾಳಾಗಿರುವುದರಿಂದ ರಜಾ ದಿನಗಳಲ್ಲಿ ಮಕ್ಕಳನ್ನು ಎಲ್ಲಿಗೆ ಕರೆದುಕೊಂಡು ಹೋಗಬೇಕು ಎಂಬುದು ಪಾಲಕರ ಚಿಂತೆಯಾಗಿದೆ. ಇದಲ್ಲದೆ, ಕೆರೆ ಬಳಿಯೇ ಕರ್ನಾಟಕ ರತ್ನ ದಿ.ಪುನೀತ್ ರಾಜಕುಮಾರ್ ಪ್ರತಿಮೆ ಅನಾವರಣಗೊಳಿಸಿದ್ದು, ವೀಕ್ಷಣೆಗೆ ಬರುವವರಿಗೆ ಬೇಸರದ ಸಂಗತಿ ಮೂಡಿಸಿದೆ.
ಕೋಟ್.... ಪ್ರವಾಸಿ ಕೆರೆ ಹಾಳಾಗಿರುವ ಬಗ್ಗೆ ಗಮನಕ್ಕೆಯಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ವಚ್ಛತೆ ಕೈಗೊಳ್ಳುವಂತೆ ಸೂಚಿಸಲಾಗಿದೆ. ಜಿಲ್ಲೆಯ ಅನುದಾನದಡಿ ಅಭಿವೃದ್ಧಿ ಪಡಿಸಿ ಸಾರ್ವಜನಿಕರ ವೀಕ್ಷಣೆಗೆ ಅನುಕೂಲ ಮಾಡಿಕೊಡಲಾಗುವುದು.
- ಮಹಮ್ಮದ್ ಎನ್.ಜುಬೇರ್, ಎಡಿಸಿ, ಬಳ್ಳಾರಿ.