ಸಂಡೂರು ತಾಲೂಕಿನ ಜೆಎಸ್‌ಡಬ್ಲೂೃ ಟೌನ್‌ಶಿಪ್‌ನಲ್ಲಿ ಆಯೋಜಿಸಿದ್ದ ಬೃಹತ್ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನರು. 
ಬಳ್ಳಾರಿ

ಕೈಗಾರಿಕಾ ಸಂಸ್ಥೆಯೊಂದಿಗೆ ಸದೃಢ ಹೆಜ್ಜೆ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ದೇಶಕ್ಕೆ ಹೆಚ್ಚಿನ ಕೊಡುಗೆ ನೀಡಲಿ
  • ಯುವಜನತೆಗೆ ಹೆಚ್ಚಿನ ಉದ್ಯೋಗಾವಕಾಶ
ಬಳ್ಳಾರಿ : ವಿಕಸಿತ ಭಾರತ ಯಾತ್ರೆಯಲ್ಲಿ ಹಲವು ಕೈಗಾರಿಕಾ ಸಂಸ್ಥೆಗಳೊಂದಿಗೆ ನಾವೆಲ್ಲರೂ ಸದೃಢ ಹೆಜ್ಜೆ ಇಡಬೇಕು ಎಂದು ಶಾಸಕಿ ಈ.ಅನ್ನಪೂರ್ಣ ತುಕಾರಾಮ್ ಹೇಳಿದರು.
ಸಂಡೂರು ತಾಲೂಕಿನ ಜೆಎಸ್‌ಡಬ್ಲೂೃ ಟೌನ್‌ಶಿಪ್‌ನಲ್ಲಿ ಭವಿಷ್ಯ ನಿಧಿ ಸಂಸ್ಥೆ ಪ್ರಾದೇಶಿಕ ಕಚೇರಿ ವತಿಯಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನ್‌ಮಂತ್ರಿ ವಿಕಸಿತ್ ಭಾರತ್ ರೋಜ್‌ಗಾರ್ ಯೋಜನೆಯಡಿ ಶುಕ್ರವಾರ ಆಯೋಜಿಸಿದ್ದ ಬೃಹತ್ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೈಗಾರಿಕಾ ಸಂಸ್ಥೆಗಳು ಇನ್ನೂ ದೊಡ್ಡ ಮಟ್ಟದಲ್ಲಿ ಬೆಳೆದು, ದೇಶಕ್ಕೆ ಹೆಚ್ಚಿನ ಕೊಡುಗೆ ನೀಡಲಿ ಹಾಗೂ ಯುವಜನತೆಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿ ಎಂದರು.
ಬಳ್ಳಾರಿ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿಯ ಆಯುಕ್ತ ಕೆ.ವಿ. ಪ್ರವೀಣ್ ಮಾತನಾಡಿ, ಮೊದಲ ಬಾರಿಗೆ ಉದ್ಯೋಗಕ್ಕೆ ಸೇರಿ ಭವಿಷ್ಯ ನಿಧಿ ಖಾತೆ ಪಡೆಯುತ್ತಿರುವ ಹೊಸ ಉದ್ಯೋಗಿಗಳಿಗೆ ಇದು ಅನ್ವಯಿಸುತ್ತದೆ. ಈ ಭಾಗದಡಿ ಉದ್ಯೋಗಿಗಳಿಗೆ ನೇರ ಲಾಭ ಸಿಗದಿದ್ದರೂ, ಉದ್ಯೋಗದಾತ ಸಂಸ್ಥೆಗಳಿಗೆ ಆರ್ಥಿಕ ನೆರವು ಸಿಗುತ್ತದೆ. ಕೇಂದ್ರ ಸರ್ಕಾರದ ಈ ವಿನೂತನ ಯೋಜನೆಯು ಬಳ್ಳಾರಿ ಭಾಗದ ಸಾವಿರಾರು ಉದ್ಯೋಗಿಗಳಿಗೆ ಮತ್ತು ಉದ್ಯೋಗದಾತ ಸಂಸ್ಥೆಗಳಿಗೆ ಆರ್ಥಿಕವಾಗಿ ದೊಡ್ಡ ಆಸರೆಯಾಗಿದೆ ಎಂದರು.
ಬಳಿಕ ಮೊದಲ ಬಾರಿ ಉದ್ಯೋಗಕ್ಕೆ ಸೇರಿ ಇಪಿಎಫ್‌ಒ ಖಾತೆ ಹೊಂದಿದ ಉದ್ಯೋಗಿಗಳಿಗೆ ಪ್ರೋತ್ಸಾಹ ಧನ ವಿತರಣೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.