ಕಂಪ್ಲಿಯಲ್ಲಿ ನಾಗಪ್ರತಿಮೆಗಳಿಗೆ ಸದ್ಭಕ್ತರು ನಾಗರ ಚವತಿ ನಿಮಿತ್ತ ಸಡಗರ ಸಂಭ್ರಮಗಳಿಂದ ಹಾಲೆರೆದರು. 
ಬಳ್ಳಾರಿ

ಬೆಳ್ಳಿ ಕಣ್ಣು-ಕೋರೆಮೀಸೆ ಅರ್ಪಣೆ

ಕಂಪ್ಲಿ: ಪಟ್ಟಣ ಮತ್ತು ತಾಲೂಕಿನಾದ್ಯಂತ ಭಾನುವಾರ ನಾಗ ಚತುರ್ಥಿ ನಿಮಿತ್ತ ನಾಗರ ಪ್ರತಿಮೆ ಮತ್ತು ಹುತ್ತಗಳಿಗೆ ಪೂಜೆ ಸಲ್ಲಿಸಿ ಹಾಲೆರೆಯಲಾಯಿತು.

ಕೋಟೆಯ ತುಂಗಭದ್ರಾ ನದಿ ತಟದ ಐತಿಹಾಸಿಕ ಪಂಪಾಪತಿ ದೇವಸ್ಥಾನ ಎದುರಿನ ನಾಗ ಪ್ರತಿಮೆಗಳ ಸಮುಚ್ಛಯ ಕಟ್ಟೆ, ದೇವಾಂಗಪೇಟೆಯ ರಾಮಲಿಂಗ ದೇವಸ್ಥಾನ, ಶ್ರೀಪೇಟೆ ಬಸವೇಶ್ವರ, ಸತ್ಯನಾರಾಯಣಪೇಟೆ ವೆಂಕಟರಮಣ ದೇವಸ್ಥಾನದಲ್ಲಿನ ಸುಬ್ರಹ್ಮಣ್ಯ ನಾಗಪ್ರತಿಮೆ, ಕಲ್ಯಾಣಚೌಕಿಮಠದ ನಾಗಪ್ರತಿಮೆ, ಎಪಿಎಂಸಿ ಆವರಣದ ಈರಣ್ಣ ಗುಡಿ ಸೇರಿ ಬಾವಿಕಟ್ಟೆ, ಅರಳಿ, ಆಲದವೃಕ್ಷಗಳ ಬುಡದಲ್ಲಿ ಪ್ರತಿಷ್ಠಾಪಿಸಿದ ನಾಗಪ್ರತಿಮೆಗಳಿಗೆ ಬೆಳ್ಳಿಯ ಕಣ್ಣು, ಕೋರೆಮೀಸೆ, ಹತ್ತಿಯ ಅಂಗನೂಲು, ತಂಬಿಟ್ಟುನೊಂದಿಗೆ ನಾನಾ ತರಹದ ಉಂಡೆ, ಹಸಿಕಡಲೆ ನೈವೇದ್ಯ ಅರ್ಪಿಸಿ ಹಾಲೆರೆದು ಭಕ್ತಿ ಸಮರ್ಪಿಸಲಾಯಿತು.
ಗ್ರಾಮೀಣರು ಹೊಲ-ಗದ್ದೆಗಳಲ್ಲಿನ ಹುತ್ತಗಳಿಗೆ ಪೂಜೆ ಸಲ್ಲಿಸಿ ಹಾಲೆರೆದರು. ಚಿತ್ರಗಾರರು ತಯಾರಿಸಿ ಮಣ್ಣು ಮತ್ತು ಬಣ್ಣ ಲೇಪಿತ ಮಣ್ಣಿನ ನಾಗ ಪ್ರತಿಮೆಗಳ ಮಾರಾಟ ಜೋರಾಗಿತ್ತು. ಮನೆ ಅಂಗಳದಲ್ಲಿ ನಾಗಬಂಧ, ನಾನಾ ನಾಗಗಳ ರಂಗೋಲಿ ಚಿತ್ರಿಸಲಾಗಿತ್ತು. ಪೇಟೆಯಲ್ಲಿ ಪೂಜಾದ್ರವ್ಯಗಳ ಮಾರಾಟ ಜೋರಾಗಿತ್ತು. ಮಹಿಳೆಯರು, ಮಕ್ಕಳು ಹೊಸವಸ್ತ್ರ ಧರಿಸಿ ಹಾಲೆರೆದು ಜೋಕಾಲಿ ಆಡಿ ಸಂಭ್ರಮಿಸಿದರು.