ಹಗರಿಬೊಮ್ಮನಹಳ್ಳಿಯಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಶಾಸಕ ಕೆ.ನೇಮಿರಾಜ್ ನಾಯ್ಕ, ತಹಸೀಲ್ದಾರ್ ಆರ್.ಕವಿತಾ, ತಾಪಂ ಇಒ ಪಿ.ವಿಶ್ವನಾಥ, ಸಿಡಿಪಿಒ ಬೋರೇಗೌಡ ಇತರರಿದ್ದರು. 
ಬಳ್ಳಾರಿ

ವಿವಿಧತೆಯಲ್ಲಿ ಏಕತೆ ಹೊಂದಿದ ದೇಶ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಕೆ.ನೇಮಿರಾಜ್ ನಾಯ್ಕ ಅಭಿಪ್ರಾಯ
  • ಹಗರಿಬೊಮ್ಮನಹಳ್ಳಿ ತಾಲೂಕು ಆಡಳಿತ ಗಣರಾಜ್ಯೋತ್ಸವ
ಹಗರಿಬೊಮ್ಮನಹಳ್ಳಿ: ಭಾರತ ಸಂವಿಧಾನ, ಧರ್ಮ, ಭಾವನೆಗಳು, ಆಚರಣೆಗಳಲ್ಲಿ ವಿವಿಧತೆಯನ್ನು ಹೊಂದಿದೆ. ಇಂತಹ ದೇಶದ ಏಕತೆಯನ್ನು ಸಾರುವ ದಿನವಾಗಿ ಗಣರಾಜ್ಯೋತ್ಸವ ಆಚರಣೆ ಮಾಡುತ್ತಿದ್ದೇವೆ ಎಂದು ಶಾಸಕ ಕೆ.ನೇಮಿರಾಜ್ ನಾಯ್ಕ ಹೇಳಿದರು.
ಪಟ್ಟಣದ ಗಂಗಾವತಿ ಭೀಮಪ್ಪನವರ ಸರ್ಕಾರಿ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ ಸೋಮವಾರ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಕಾಳಜಿ ಮುಖ್ಯವಾಗಿದ್ದು, ರಾಷ್ಟ್ರದಲ್ಲಿ ಏಕರೂಪ ಕಾನೂನುಗಳು ಜಾರಿಯಾಗಲಿ, ಯುವಸಮೂಹಕ್ಕೆ ಉದ್ಯೋಗ ಲಭಿಸಲಿ, ತಾಂತ್ರಿಕತೆಯಲ್ಲಿ ಪ್ರಗತಿ ಕಾಣಲಿ ಮತ್ತು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ನಿರ್ಭಯವಾಗಿ ಪರೀಕ್ಷೆ ಬರೆದು, ಉತ್ತಮ ಅಂಕಗಳನ್ನು ಪಡೆಯಿರಿ ಎಂದು ಆಶಿಸಿದರು.
ತಹಸೀಲ್ದಾರ್ ಆರ್.ಕವಿತಾ ಧ್ವಜಾರೋಹಣ ನೆರವೇರಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರು, ನಿವೃತ್ತ ಸೈನಿಕರು, ರಾಷ್ಟ್ರಮಟ್ಟದಲ್ಲಿ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಮಾದರಿ ಪ್ರದರ್ಶಿಸಿದ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳಾದ ಎಂ.ಎಸ್.ರಾಹುಲ್, ಕೆ.ಶಾಬುದ್ಧೀನ್, ಪೌರ ಕಾರ್ಮಿಕರು, ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದವರನ್ನು ಸನ್ಮಾನಿಸಿಲಾಯಿತು.
ಪುರಸಭೆ ಅಧ್ಯಕ್ಷ ಮರಿರಾಮಣ್ಣ, ಉಪಾಧ್ಯಕ್ಷೆ ಅಂಬಿಕಾ ದೇವೇಂದ್ರ, ಸದಸ್ಯರಾದ ಚನ್ನಮ್ಮ ವಿಜಯಕುಮಾರ್, ಮಂಜುಳಾ ಕೃಷ್ಣನಾಯ್ಕ, ಮಂಗಳಾಗೌಡ, ಬಣಕಾರ ಸುರೇಶ, ಬಿ.ಗಂಗಾಧರ, ಜೋಗಿ ಹನುಮಂತಪ್ಪ, ದೀಪಕ್ ಸಾ ಕಠಾರೆ, ನಾಗರಾಜ ಜನ್ನು, ಪಿ.ಹನುಮಂತಪ್ಪ, ನಾಮನಿರ್ದೇಶಿತ ಸದಸ್ಯ ಮಂಜುನಾಥ, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಗುರುಬಸವರಾಜ ಸೊನ್ನದ್, ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.
ಎದ್ದುಹೋದ ಜನಪ್ರತಿನಿಧಿಗಳು: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ನೇಮಿರಾಜ್ ನಾಯ್ಕ ಮಾತನಾಡಲು ಆರಂಭಿಸುತಿದ್ದಂತೆ, ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷೆ, ಕೆಲ ಸದಸ್ಯರು ಹಾಗೂ ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ವೇದಿಕೆಯಿಂದ ಎದ್ದು ಹೋದರು. ಈ ಬಗ್ಗೆ ಅಧ್ಯಕ್ಷ ಮರಿರಾಮಪ್ಪ ಪ್ರತಿಕ್ರಿಯಿಸಿ, ನಾನು ಪಟ್ಟಣದ ಪ್ರಥಮ ಪ್ರಜೆಯಾಗಿದ್ದು, ನನಗೆ ಮಾತನಾಡಲು ಅವಕಾಶ ನೀಡದೆ ಇದ್ದಕ್ಕಿದ್ದಂತೆ ಅಧ್ಯಕ್ಷೀಯ ಭಾಷಣ ನೀಡಿ ನಮಗೆ ಅವಮಾನಿಸಿದ ವೇದಿಕೆಯಲ್ಲಿ ನಾವು ಕೂಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.