ವೀರಶೈವ ಲಿಂಗಾಯತ ಮಹಾವೇದಿಕೆ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ್ ಹುಟ್ಟುಹಬ್ಬದ ನಿಮಿತ್ತ ಕಂಪ್ಲಿಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಪ್ರಮುಖರಾದ ಪ್ರಶಾಂತ್ ಕಲ್ಲೂರ್, ಬಳೆ ಮಲ್ಲಿಕಾರ್ಜುನ, ಬಿ.ಎಂ.ಕರಿಬಸಯ್ಯ, ಬಿ.ಎಂ.ಪುಷ್ಪ ರುದ್ರಯ್ಯ ಇತರರಿದ್ದರು.’
- ಶ್ರೀ ವಾಮದೇವ ಶಿವಾಚಾರ್ಯರ ಆಶೀರ್ವಚನ
- ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಕಂಪ್ಲಿ: ಅಹಿಂಸೆ, ಸತ್ಯ, ದಯೆ, ದಾನ ಮೊದಲಾದ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡವರೇ ದೊಡ್ಡ ಮನುಷ್ಯರು ಎಂದು ಎಮ್ಮಿಗನೂರಿನ ಹಂಪಿಸಾವಿರದೇವರ ಮಠದ ವಾಮದೇವ ಶಿವಾಚಾರ್ಯರು ಹೇಳಿದರು.
ಪಟ್ಟಣದ ವೀರಶೈವ ಭವನದಲ್ಲಿ ವೀರಶೈವ ಲಿಂಗಾಯತ ಮಹಾವೇದಿಕೆಯಿಂದ ವೇದಿಕೆ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ್ ಹುಟ್ಟುಹಬ್ಬದ ನಿಮಿತ್ತ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಗುರುವಾರ ಮಾತನಾಡಿದರು. ಸರ್ವ ಸಮುದಾಯಗಳ ಮಕ್ಕಳಿಗೆ ಅನ್ನ, ವಸ್ತ್ರ, ವಸತಿ, ಶಿಕ್ಷಣ ನೀಡುವಲ್ಲಿ ವೀರಶೈವ ಮಠಗಳು ಮುಂಚೂಣಿಯಲ್ಲಿವೆ. ವೀರಶೈವ ಲಿಂಗಾಯತ ಸಮುದಾಯ ಸರ್ವಧರ್ಮಗಳಲ್ಲಿ ಸಮಾನತೆಯನ್ನು ಕಾಣುತ್ತದೆ ಎಂದರು.
ವೀರಶೈವ ಲಿಂಗಾಯತ ಮಹಾವೇದಿಕೆ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಹುಟ್ಟುಹಬ್ಬವನ್ನು ಮಾದರಿಯಾಗಿ ಆಚರಿಸಿಕೊಳ್ಳಲು ಸರ್ವ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಸಮುದಾಯದ ವಿದ್ಯಾರ್ಥಿಗಳ ಅನುಕೂಲಕ್ಕೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ವೇದಿಕೆ ರಾಜ್ಯಾಧ್ಯಕ್ಷ ಪ್ರಶಾಂತ್ ಕಲ್ಲೂರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಲ್ಯಾಣಚೌಕಿಮಠದ ಬಸವರಾಜಶಾಸ್ತ್ರಿ, ಮುಸ್ಲಿಂ ಧರ್ಮಗುರು ಸೈಯದ್ ಷಾಹ್ ಅಬುಲ್ ಹಸನ್ ಖಾದ್ರಿ, ಕ್ರಿಶ್ಚಿಯನ್ ಫಾಸ್ಟರ್ಸ್ ವೆಲ್ಫೇರ್ ಅಸೋಷಿಯೇನ್ ತಾಲೂಕು ಅಧ್ಯಕ್ಷ ಪಾಲ್ ಪಂಪಾಪತಿ, ವೇದಿಕೆ ರಾಜ್ಯ ಉಪಾಧ್ಯಕ್ಷ ಬಿ.ವಿ.ಗೌಡ, ತಾಲೂಕು ಅಧ್ಯಕ್ಷ ಬಳೆ ಮಲ್ಲಿಕಾರ್ಜುನ, ಪದಾಧಿಕಾರಿಗಳಾದ ಕೆ.ರೇಣುಕಪ್ಪ, ಆನಂದರೆಡ್ಡಿ, ಅಮರೇಗೌಡ, ಎಸ್.ಚಂದ್ರಶೇಖರಗೌಡ, ಶಂಭುಲಿಂಗ, ಚಟ್ನಳ್ಳಿ ಶರಣ, ಹಂಪಾರೆಡ್ಡಿ, ಕೋರಿ ಚನ್ನಬಸವ, ಮನೋಜಗೌಡ ಇದ್ದರು.