ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣದಲ್ಲಿ ಯುಗಾದಿ ಹಬ್ಬ ಅಂಗವಾಗಿ ಪ್ರದರ್ಶನಗೊಂಡ ಮೋಡಿಕಾರ ಆಟ 
ಬಳ್ಳಾರಿ

ಜನಮನ ರಂಜಿಸಿದ ಮೋಡಿಕಾರ ಆಟ

ರುದ್ರಪ್ಪ ವಾಲಿ

ಪ್ರಮುಖ ಮುಖ್ಯಾಂಶಗಳು

  • ಮೋಡಿಕಾರ
  • ಆಟಕ್ಕೆ
  • ಎಲ್ಲರೂ
ಹಗರಿಬೊಮ್ಮನಹಳ್ಳಿ: ಯುಗಾದಿ ನಿಮಿತ್ತ ತಾಲೂಕಿನ ಹಂಪಾಪಟ್ಟಣದಲ್ಲಿ ಪ್ರತಿ ವರ್ಷದಂತೆ ಮೋಡಿಕಾರ ಆಟವನ್ನು ಗ್ರಾಮದ ಕಲಾವಿದರು ಪ್ರದರ್ಶಿಸಿ ಜನರನ್ನು ನಕ್ಕು ನಲಿಸಿದರು.
ಗ್ರಾಮಸ್ಥರ ಮೋಡಿಕಾರ ಆಟಕ್ಕೆ ತನ್ನದೇ ಆದ ಮಹತ್ವವಿದ್ದು, ನೂರಾರು ಜನರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ರಂಗು ರಂಗಿನ ಐದು ಚೌಕಟ್ಟುಗಳನ್ನು ನಿರ್ಮಿಸಲಾಗುತ್ತದೆ. ಅದರೊಳಗೆ ಶಕ್ತಿ ದೇವತೆ ಪ್ರತಿಷ್ಠಾಪಿಸಿ, ಐದು ರಂಗದ ಒಳಗೆ ಹೋಳಿಗೆ ಸೇರಿ ವಿವಿಧ ಭಕ್ಷ ಭೋಜನಗಳನ್ನಿರಿಸುತ್ತಾರೆ.
ಮೋಡಿಕಾರ ಆಟಕ್ಕೆ ಎಲ್ಲರೂ ಅಣಿಯಾಗುತ್ತಾರೆ. ಆಟದ ಪ್ರತಿವಾದಿಗಳನ್ನು ಹಲಿಗೆ ವಾದನ ಮೂಲಕ ಕರೆತರುತ್ತಾರೆ. ಪೂಜೆ ಬಳಿಕ ಆಟ ಪ್ರಾರಂಭವಾಗುತ್ತದೆ. ಪ್ರತಿವಾದಿಗಳು ತಮ್ಮ ತಂತ್ರ, ಶಕ್ತಿ ಮೂಲಕ ಜನರನ್ನೂ ರಂಜಿಸುತ್ತಾರೆ. ಪರಾಕ್ರಮ ಮೂಲಕ ಹಲಗೆಯ ನಾದಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ರಂಗ ಮಂಟಪದ ಮೇಲೆ ವಸ್ತುಗಳನ್ನು ಕದಿಯಲು ಬರುತ್ತಾರೆ. ರಂಗ ಮಂಟಪದ ಶಕ್ತಿ ದೇವತೆ ಆರಾಧಕ ಮೈ ಮೇಲೆ ದೇವತೆ ಆಹ್ವಾನಿಸಿಕೊಂಡು ಬೇವಿನ ತಪ್ಪಲನ್ನು ಹಿಡಿದುಕೊಂಡು ತನ್ನ ವಿವಿಧ ಮಜಲುಗಳನ್ನು ಬಳಸಿ ಪ್ರತಿವಾದಿಗಳನ್ನು ಎದುರಿಸುವ ಕಲೆ ಪ್ರದರ್ಶನದೊಂದಿಗೆ ಜನರನ್ನು ರಂಜಿಸಲಾಗುತ್ತದೆ.
ಮೋಡಿ ಆಟಗಾರರಾಗಿ ಎಚ್.ಫಕೀರಪ್ಪ, ಎದುರಾಳಿಯಾಗಿ ಕರ್ಕಟ್ಟಿ ನಾಗರಾಜ, ಚಂದ್ರಪ್ಪ, ತಿಂದಪ್ಪ, ವಟಮ್ಮನಹಳ್ಳಿ ಮಂಜುನಾಥ, ಟಿ. ಹನುಮಂತಪ್ಪ, ದೇವಿಯ ಆರಾಧಕರಾಗಿ ಬಡಿಗೇರ್ ಪಂಪಣ್ಣ, ಕಂಬಾರ ಹುಲ್ಲೇಶ್ ಇತರರಿದ್ದರು. ಹಲಗೆ ವಾದಕರಾಗಿ ಎಚ್.ಹುಲಗಪ್ಪ, ಎಚ್.ನಿಂಗಪ್ಪ. ಎಚ್.ದುರ್ಗಪ್ಪ, ಪೂಜಾರಿ ಹುಲುಗಪ್ಪ ಪಾಲ್ಗೊಂಡಿದ್ದರು. ಪ್ರಮುಖರಾದ ಎಚ್.ಸೋಮನಾಥ, ಸೀಗೇನಹಳ್ಳಿ ಬಸವರಾಜ, ಭಂಟರ ಕುಬೇರ, ಡಿ.ಹನುಮಂತ, ಕೆ.ಹುಲುಗಪ್ಪ, ಬಲ್ಲಪ್ಪ ಇತರರಿದ್ದರು.