ಪ್ರೊ.ಬಿ.ಕೃಷ್ಣಪ್ಪ ಜನ್ಮದಿನಾಚರಣೆ ನಿಮಿತ್ತ ಕಂಪ್ಲಿಯ ಕಂಪಿಲರಾಯ ಬುದ್ಧಿಮಾಂದ್ಯ ವಿಶೇಷ ಶಾಲೆ ಮಕ್ಕಳಿಗೆ ದಲಿತ ಸಂಘರ್ಷ ಸಮಿತಿಯಿಂದ ಹಣ್ಣು, ಹಾಲು, ಬ್ರೆಡ್ ವಿತರಿಸಲಾಯಿತು. 
ಬಳ್ಳಾರಿ

ಸ್ವಾಭಿಮಾನದ ಕಿಚ್ಚು ಹಚ್ಚಿದ ಧೀಮಂತ

ಕಂಪ್ಲಿ: ದಲಿತರ ಉದ್ಧಾರಕ್ಕಾಗಿ ದಲಿತ ಸಂಘರ್ಷ ಸಮಿತಿ ಸ್ಥಾಪಿಸಿ ಮುಂಚೂಣಿಗೆ ತರುವಲ್ಲಿ ಪ್ರೊ.ಬಸಪ್ಪ ಕೃಷ್ಣಪ್ಪ ಪ್ರಮುಖರಾಗಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ತಾಲೂಕು ಸಂಚಾಲಕ ಎಚ್.ಗುಂಡಪ್ಪ ಹೇಳಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಕಂಪಿಲರಾಯ ಬುದ್ಧಿಮಾಂದ್ಯ ವಿಶೇಷ ಶಾಲೆ ಆವರಣದಲ್ಲಿ ದಸಂಸ ತಾಲೂಕು ಘಟಕದಿಂದ ಆಯೋಜಿಸಿದ್ದ ಪ್ರೊ.ಬಿ.ಕೃಷ್ಣಪ್ಪ ಅವರ 88ನೇ ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.

ದಲಿತರಿಗೂ ಹಕ್ಕುಗಳಿದ್ದು, ಅವುಗಳನ್ನು ಸಮರ್ಥವಾಗಿ ಬಳಸಿಕೊಳ್ಳುವಂತೆ ಪ್ರೊ.ಕೃಷ್ಣಪ್ಪ ಕರೆ ನೀಡಿದ್ದರು. ಸಾಮಾಜಿಕ, ಕ್ರಾಂತಿಕಾರಿ ಮನೋಭಾವನೆಯುಳ್ಳ ಕೃಷ್ಣಪ್ಪ ಅವರು ದಲಿತರ ಬಾಳಲ್ಲಿ ಸ್ವಾಭಿಮಾನದ ಕಿಚ್ಚನ್ನು ಪ್ರೇರೇಪಿಸಲು ಹೋರಾಟ ಹಮ್ಮಿಕೊಂಡಿದ್ದರು ಎಂದರು.
ತಾಲೂಕು ಸಂಘಟನಾ ಸಂಚಾಲಕ ಮರಿಯಪ್ಪ ಮಾತನಾಡಿ, ಚಂದ್ರಗುತ್ತಿ ಬೆತ್ತಲೆ ಸೇವೆ ನಿಷೇಧಿಸುವಲ್ಲಿ ಬಿ.ಕೃಷ್ಣಪ್ಪ ಅವರ ಹೋರಾಟ ಸ್ಮರಣೀಯವಾಗಿದೆ. ಸಮಾಜದಲ್ಲಿನ ಸಾಂಪ್ರದಾಯಿಕ ಕಟ್ಟುಪಾಡುಗಳನ್ನು ವಿರೋಧಿಸಿ ಆದರ್ಶರಾಗಿದ್ದಾರೆ ಎಂದರು.
ಬುದ್ಧಿಮಾಂದ್ಯ ಶಾಲೆ ಮಕ್ಕಳಿಗೆ ಹಣ್ಣು, ಹಾಲು, ಬ್ರೆಡ್ ವಿತರಿಸಲಾಯಿತು. ತಾಲೂಕು ಸಮಿತಿ ಸಲಹೆಗಾರ ಎ.ಲಕ್ಷ್ಮಿಪತಿ, ಸಂಘಟನಾ ಸಂಚಾಲಕರಾದ ಹುಲುಗಪ್ಪ, ರಾಮಲಿ, ಈರಣ್ಣ, ಯಲ್ಲಪ್ಪ, ಗ್ರಾಮ ಸಂಚಾಲಕರಾದ ಪರಶುರಾಮ, ಉಮೇಶ್, ರುದ್ರೇಶ್, ಕಾರ್ಯಕರ್ತರು, ಪ್ರಮುಖರಿದ್ದರು.