ಕಂಪ್ಲಿ ಶಿಬರದಿನ್ನಿ ಪ್ರದೇಶದಲ್ಲಿ ಆಂಜನೇಯ ದೇವಸ್ಥಾನ ಸ್ಥಳ ಅತಿಕ್ರಮಣ ಆರೋಪಕ್ಕೆ ಸಂಬಂಧಿಸಿದಂತೆ ಕಂದಾಯ ನಿರೀಕ್ಷಕ ವೈ.ಎಂ.ಜಗದೀಶ ಅವರು ದೂರುದಾರ ಎಚ್.ಸಂಜೀವರಿಂದ ಮಾಹಿತಿ ಪಡೆದರು.  
ಬಳ್ಳಾರಿ

74 ಸೆಂಟ್ಸ್ ಜಾಗ ಕಾನೂನುಬಾಹಿರ ಮಾರಾಟ

ಕಂಪ್ಲಿ: ಪಟ್ಟಣದ ಶಿಬರದಿನ್ನಿಯಲ್ಲಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಸಂಬಂಧಿಸಿದ ಸ್ಥಳ ಅತಿಕ್ರಮಣವಾಗಿರುವ ದೂರಿನ ಹಿನ್ನೆಲೆಯಲ್ಲಿ ತಹಸಿಲ್ ಕಚೇರಿಯ ಕಂದಾಯ ನಿರೀಕ್ಷಕ ವೈ.ಎಂ.ಜಗದೀಶ್ ಮತ್ತು ಮತ್ತಿತರ ಅಧಿಕಾರಿಗಳು ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.
ದೂರುದಾರ ಎಚ್.ಸಂಜೀವ ಮಾತನಾಡಿ, ಶಿಬರದಿನ್ನಿಯ ಬಲಭಾಗದ ಸರ್ವೇ ನಂ. 619ರ 1.59 ಎಕರೆ, 620ರ 7.35 ಎಕರೆ, 621ರ 5.93 ಎಕರೆ, 622ರ 6.29 ಎಕರೆ, ಎಡಭಾಗದ ಸರ್ವೇ ನಂ. 1248ರ 10.74 ಎಕರೆ, 1249ರ 11.38 ಎಕರೆ ಸೇರಿ ಒಟ್ಟಾರೆ 43.28ಎಕರೆ ಭೂಮಿಯನ್ನು 1983ರಲ್ಲಿ ಸರ್ಕಾರ ಪುರಸಭೆಗೆ ನೀಡಿತ್ತು. ಸರ್ವೇ ನಂ. 619ರ 1.59 ಎಕರೆಯಲ್ಲಿನ 74 ಸೆಂಟ್ಸ್‌ನಲ್ಲಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ, ಕಲ್ಯಾಣಿ, ತುಳಸಿಕಟ್ಟೆ ಸ್ಥಳ ಪುರಸಭೆಗೆ ಸೇರಿದೆ. ದೇವಸ್ಥಾನ ಸೇರಿದಂತೆ 74 ಸೆಂಟ್ಸ್ ಭೂಮಿಯನ್ನು ಪುರಸಭೆ ಅನ್ಯರಿಗೆ ಮಾರಾಟ ಮಾಡಿದ್ದು ಕಾನೂನುಬಾಹಿರವಾಗಿದೆ. ಇದನ್ನು ಸಹಾಯಕ ಆಯುಕ್ತರು ಸರಿಪಡಿಸದೆ ಕಾನೂನುಬಾಹಿರ ವ್ಯವಹಾರಕ್ಕೆ ಅವಕಾಶ ನೀಡಿದ್ದಾರೆ ಎಂದು ಆಪಾದಿಸಿದರು.
ಕಂದಾಯ ನಿರೀಕ್ಷಕ ವೈ.ಎಂ.ಜಗದೀಶ, ತಾಲೂಕು ಮೋಜಣಿದಾರ ಅನಿಲ್, ವಿಎಒ ಎನ್.ಕಾಂತರಾಜ ಮಾತನಾಡಿ, ಸರ್ವೇ ನಂಬರ್ 619ರ 1.59ಎಕರೆಯಲ್ಲಿ 60 ಸೆಂಟ್ಸ್ ಪೊಲೀಸ್ ಕ್ವಾರ್ಟಸ್‌ಗೆ, 25 ಸೆಂಟ್ಸ್ ದಾರಿಗಾಗಿ ನೀಡಿದ್ದು, ಉಳಿದ 74 ಸೆಂಟ್ಸ್ ಭೂಮಿಯನ್ನು 10 ಜನರ ಹೆಸರಿಗೆ ಎಸಿ ಪಟ್ಟಾ ನೀಡಿದ್ದಾರೆ. ಈ 74 ಸೆಂಟ್ಸ್ ಭೂಮಿಯಲ್ಲಿ ಮೂರೂವರೆ ಸೆಂಟ್ಸ್‌ನಲ್ಲಿ ಆಂಜನೇಯ ಗುಡಿ, ಒಂದು ಮೂಕ್ಕಾಲು ಸೆಂಟ್ಸ್‌ನಲ್ಲಿ ಧ್ವಜಸ್ತಂಭ, ನಾಲ್ಕು ಸೆಂಟ್ಸ್ ಕಲ್ಯಾಣಿ, ಒಂದು ಸೆಂಟ್ಸ್ ದಾರಿ, 24 ಮೂಕ್ಕಾಲು ಸೆಂಟ್ಸ್ ಮನೆಗಾಗಿ ನೀಡಿದ್ದು 39 ಸೆಂಟ್ಸ್ ಖಾಲಿ ಜಾಗ ಇದೆ. ದಾಖಲೆಯಂತೆ ಅತಿಕ್ರಮಣವಾಗಿಲ್ಲ ಎಂದರು.