ಹಗರಿಬೊಮ್ಮನಹಳ್ಳಿಯಲ್ಲಿ ಅಂಬೇಡ್ಕರ್ ಹಾಗೂ ಬಾಬೂಜಿ ಜಯಂತ್ಯುತ್ಸವ ವನ್ನು ಶಾಸಕ ಕೆ.ನೇಮಿರಾಜ್ ನಾಯ್ಕ ಉದ್ಘಾಟಿಸಿದರು. ಪೌರ ನೌಕರರ ಸಂಘದ ರಾಜ್ಯಾಧ್ಯಕ್ಷ ಪ್ರಭಾಕರ, ಬಿಇಒ ಪ್ರಭಾಕರ, ಪುರಸಭೆ ಮುಖ್ಯಾಧಿಕಾರಿ ಎಂ.ಕೆ.ಮುಗಳಿ, ಜಗದೀಶ ದಿಗಡೂರ್, ಸಿಪಿಐ ವಿಕಾಸ್ ಲಮಾಣಿ, ಪೂಜಪ್ಪ, ಬಸವರೆಡ್ಡಿ ಸಿ.ಬಸವರಾಜ ಇತರರಿದ್ದರು. 
ಬಳ್ಳಾರಿ

ಪುತ್ಥಳಿ ನಿರ್ಮಾಣ ಕಾರ್ಯಕ್ಕೆ ₹60 ಲಕ್ಷ ಅನುದಾನ

ಹಗರಿಬೊಮ್ಮನಹಳ್ಳಿ: ಎಸ್ಸಿ, ಎಸ್ಟಿ ಅಭಿವೃದ್ಧಿಗಾಗಿ ಮೀಸಲಿರಿಸಿದ್ದ ಹಣವನ್ನು ದುರ್ಬಳಕೆ ಮಾಡಿಕೊಂಡು ಸಮುದಾಯದ ಜನರಿಗೆ ರಾಜ್ಯ ಸರ್ಕಾರ ಅನ್ಯಾಯ ಮಾಡಿದೆ ಎಂದು ಶಾಸಕ ಕೆ.ನೇಮಿರಾಜ್ ನಾಯ್ಕ ಹೇಳಿದರು.
ಪಟ್ಟಣದ ರಾಮನಗರದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ತಾಲೂಕು ಆಡಳಿತ ಮಂಗಳವಾರ ಏರ್ಪಡಿಸಿದ್ದ ಅಂಬೇಡ್ಕರ್ ಹಾಗೂ ಬಾಬೂಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಯಾವುದೇ ಅನ್ಯಾಯವನ್ನು ಖಂಡಿಸುವಂತಹ ಶಕ್ತಿಯನ್ನು ನಮಗೆ ಸಂವಿಧಾನವೇ ಕೊಟ್ಟಿದೆ.
ದೇಶದಲ್ಲಿ ಮಹಿಳೆಯರಿಗೂ ಶೇ.33 ಮೀಸಲಾತಿಯನ್ನು ಜಾರಿಗೆ ತರುವಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಶ್ರಮಿಸಿದ್ದಾರೆ. ಲೋಕಸಭೆ ಮತ್ತು ವಿಧಾನಸಭೆಗೆ ಮಹಿಳೆಯರು ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿರುವುದು ದೇಶದ ಸಂವಿಧಾನ. ಕಳೆದ 10 ವರ್ಷ ಕ್ಷೇತ್ರದಲ್ಲಿ ಆಡಳಿತ ನಡೆಸಿದವರಿಂದ ಅಂಬೇಡ್ಕರ್ ಪುತ್ಥಳಿ ಪ್ರತಿಷ್ಠಾಪಿಸಲು ಸಾಧ್ಯವಾಗಲಿಲ್ಲ. ಪುತ್ಥಳಿ ನಿರ್ಮಾಣ ಕಾರ್ಯಕ್ಕೆ 60 ಲಕ್ಷ ರೂ. ಅನುದಾನ ನೀಡುವುದಲ್ಲದೆ, ಮುಂದಿನ ವರ್ಷ ಅದರ ಉದ್ಘಾಟನೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಗುವುದು ಎಂದು ಭರವಸೆ ನೀಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ಗದ್ದಿಕೆರೆ ಎಚ್.ದೊಡ್ಡಬಸಪ್ಪ ಉಪನ್ಯಾಸ ನೀಡಿ, ಪ್ರಪಂಚವೇ ತಿರುಗಿ ನೋಡುವಂತೆ ರಚನೆಯಾದ ನಮ್ಮ ಸಂವಿಧಾನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು. ತಹಸೀಲ್ದಾರ್ ಆರ್.ಕವಿತಾ ಮಾತನಾಡಿ, ಸಮಾಜದ ಸಮಾನತೆಗಾಗಿ ಹೋರಾಡಿದ ಮಹಾನ್ ವ್ಯಕ್ತಿ ಅಂಬೇಡ್ಕರ್ ಎಂದರು. ತಾ.ಪಂ. ಇಒ ಪಾಲಯ್ಯನಕೋಟೆ ವಿಶ್ವನಾಥ ಮಾತನಾಡಿ, ಮಹನೀಯರ ಆದರ್ಶ ಪಾಲಿಸಬೇಕು ಎಂದರು.
ಪುರಸಭೆ ಹಂಗಾಮಿ ಅಧ್ಯಕ್ಷೆ ಸೆರೆಗಾರ್ ನೇತ್ರಾವತಿ ಹುಚ್ಚಪ್ಪ, ಸದಸ್ಯ ಗಣೇಶ, ಚೇಂಬರ್ ಆಫ್ ಕಾಮರ್ಸ್ ತಾಲೂಕು ಅಧ್ಯಕ್ಷ ಬಾದಾಮಿ ಮೃತ್ಯುಂಜಯ, ಗ್ಯಾರಂಟಿ ಯೋಜನೆಗಳ ಸಮಿತಿ ತಾಲೂಕು ಅಧ್ಯಕ್ಷ ಸೊನ್ನದ ಗುರುಬಸವರಾಜ, ಪ್ರಮುಖರಾದ ಹೆಗ್ಡಾಳ್ ರಾಮಣ್ಣ, ವಕೀಲ ಸತ್ಯನಾರಾಯಣ, ಸುಭಾಷ್ ನಾಯ್ಕ ಮೈಲಪ್ಪ, ಮಲ್ಲೇಶ್ವರಪ್ಪ, ಕನ್ನಿಹಳ್ಳಿ ಚಂದ್ರಶೇಖರ್, ಸಿ.ಕಾಹಳೆ ಬಸವರಾಜ, ಸರ್ದಾರ್ ಹುಲಿಗೆಮ್ಮ, ಆನಂದಳ್ಳಿ ಪ್ರಭಾಕರ, ಬ್ಯಾಲಾಳ್ ಮಂಜುನಾಥ, ಮಹೇಶ, ಯಮನೂರಪ್ಪ, ಅಲಬೂರು ಗಣೇಶ, ಕೆ.ದುರುಗಪ್ಪ, ವರಲಹಳ್ಳಿ ಗಣೇಶ, ವೈ.ಮರಿಯಪ್ಪ, ಅರ್ಜುನ್ ಮತ್ತಿತರರು ಇದ್ದರು. ಕಾರ್ಯಕ್ರಮಕ್ಕೂ ಮುನ್ನ ಹಗರಿ ಆಂಜನೇಯಸ್ವಾಮಿ ದೇಗುಲದಿಂದ ಅದ್ದೂರಿ ಮೆರವಣಿಗೆ ನಡೆಯಿತು.