ಕೊಟ್ಟೂರು ಪಟ್ಟಣ ಪಂಚಾಯಿತಿ ಆವರಣದಲ್ಲಿ ನ್ಯಾಯಾಲಯ ಆರಂಭಕ್ಕೆ ಗುರುತಿಸಿರುವ ಕಟ್ಟಡವನ್ನು ವಿಜಯನಗರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕೆ.ಎಂ.ರಾಜಶೇಖರ ಪರಿಶೀಲಿಸಿದರು. ಕೂಡ್ಲಿಗಿ ನ್ಯಾಯಾಧೀಶ ಯೋಗೇಶ, ಸಿಪಿಐ ದುರುಗಪ್ಪ, ಪಿಎಸ್‌ಐ ಗೀತಾಂಜಲಿ ಸಿಂಧೆ ಇತರರಿದ್ದರು.
- ಕೊಟ್ಟೂರು ಪಟ್ಟಣ ಪಂಚಾಯಿತಿ ಆವರಣದಲ್ಲಿ ನ್ಯಾಯಾಲಯ
- ವಿಜಯನಗರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕೆ.ಎಂ.ರಾಜಶೇಖರ ಕಟ್ಟಡ ವೀಕ್ಷಣೆ
- ಆರು ತಿಂಗಳೊಳಗೆ ಕಟ್ಟಡ ಕಾಮಗಾರಿ ಪೂರ್ಣ
ಜಿಲ್ಲಾ ಪ್ರಧಾನ-ಸತ್ರ ನ್ಯಾಯಾಧೀಶ ಕೆ.ಎಂ.ರಾಜಶೇಖರ ಮಾಹಿತಿ
ಕೊಟ್ಟೂರು: ಕೂಡ್ಲಿಗಿ ನ್ಯಾಯಾಲಯದಲ್ಲಿ ಅಧಿಕ ಮೊಕದ್ದಮೆಗಳಿರುವ ಹಿನ್ನೆಲೆಯಲ್ಲಿ ಕೊಟ್ಟೂರಿನಲ್ಲಿ ನ್ಯಾಯಾಲಯ ಆರಂಭವಾಗಲಿದೆ ಎಂದು ವಿಜಯನಗರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕೆ.ಎಂ.ರಾಜಶೇಖರ ಹೇಳಿದರು.
ಪಟ್ಟಣದ ಪಪಂ ಆವರಣದಲ್ಲಿ ನ್ಯಾಯಾಲಯ ಆರಂಭಕ್ಕೆ ಗುರುತಿಸಿರುವ ಕಟ್ಟಡ ಪರಿಶೀಲಿಸಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಪಟ್ಟಣದಲ್ಲಿ ರೆಗ್ಯುಲರ್ ನ್ಯಾಯಾಲಯ ಆರಂಭವಾಗಲಿದ್ದು, ಈ ಕಟ್ಟಡ ಚಿಕ್ಕದಾಗಲಿದೆ. ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕಾಗಿ ಐದು ಎಕರೆ ಜಮೀನು ಬೇಕಾಗಿದ್ದು, ಮಂಜೂರಾದರೆ ಶಾಶ್ವತ ನ್ಯಾಯಾಲಯ ನಿರ್ಮಾಣವಾಗಲಿದೆ ಎಂದು ತಿಳಿಸಿದರು.
ತಾತ್ಕಾಲಿಕ ನ್ಯಾಯಾಲಯ ಕಟ್ಟಡದ ಕಾಮಗಾರಿ ಆರಂಭವಾಗಿದ್ದು, ಆರು ತಿಂಗಳೊಳಗೆ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಇಂಜಿನಿಯರ್ ದೊಡ್ಡಮನಿ ಕೊಟ್ರೇಶ ಹೇಳಿದರು. ಪಟ್ಟಣ ಪಂಚಾಯಿತಿ ಕಟ್ಟಡ ನ್ಯಾಯಾಲಯಕ್ಕೆ ಸೂಕ್ತವಾಗಿದೆ ಎಂಬ ವಕೀಲರ ಮಾಹಿತಿಗೆ, ನ್ಯಾಯಾಧೀಶ ಕೆ.ಎಂ.ರಾಜಶೇಖರ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ ತಿಳಿಸಿ ಎಂದರು. ನಂತರ ಕೊಟ್ಟೂರೇಶ್ವರ ಸ್ವಾಮಿ ದರ್ಶನ ಪಡೆದರು. ಕೂಡ್ಲಿಗಿ ನ್ಯಾಯಾಧೀಶ ಯೋಗೇಶ, ವಕೀಲರ ಸಂಘದ ಅಧ್ಯಕ್ಷ ಗುರುಸಿದ್ದನಗೌಡ. ಮಾಜಿ ಅಧ್ಯಕ್ಷ ಎಚ್.ಎಂ.ಪಂಡಿತಾರಾಧ್ಯ, ಪ್ರಭುದೇವ, ಭಾವಿಕಟ್ಟಿ ಶಿವಾನಂದ, ಸೋಮಯ್ಯ, ಲಿಂಗರಾಜ್, ಶಿವಪ್ರಕಾಶ್, ದೇವರಮನಿ ಕರಿಬಸವರಾಜ್, ಟಿ.ಹನುಮಂತಪ್ಪ, ಸಾವಿತ್ರಿಬಾಯಿ, ದುರುಗೇಶ ಇತರರಿದ್ದರು.