2ನೇ ವರ್ಷದ ವಾರ್ಷಿಕೋತ್ಸವ 
ಬಳ್ಳಾರಿ

2ನೇ ವರ್ಷದ ವಾರ್ಷಿಕೋತ್ಸವ

ಪ್ರಮುಖ ಮುಖ್ಯಾಂಶಗಳು

  • ವಾರ್ಷಿಕೋತ್ಸವ
ಬಳ್ಳಾರಿ : ಇಲ್ಲಿನ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಫೆ.22ರಂದು ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಎರಡನೇ ವಾರ್ಷಿಕೋತ್ಸವದ ಅಂಗವಾಗಿ ನಾನಾ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಯಲ್ಲನಗೌಡ ಶಂಕರಬಂಡೆ ಹೇಳಿದರು.
ನಗರದ ಕನ್ನಡ ಭವನದಲ್ಲಿ ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅಂದು ಬೆಳಗ್ಗೆ ಒಂಬತ್ತು ಗಂಟೆಗೆ ಎಚ್.ಆರ್.ಗವಿಯಪ್ಪ ವೃತ್ತದಿಂದ ರಂಗಮಂದಿರವರೆಗೆ ವಸಂತ ವೈಭವ ಮೆರವಣಿಗೆ ನಡೆಯಲಿದ್ದು, ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್ ಚಾಲನೆ ನೀಡಲಿದ್ದಾರೆ. ಮೆರವಣಿಗೆಯಲ್ಲಿ ಕಹಳೆ, ತಾಷಾರಂ ಡೋಲ್, ಡೊಳ್ಳು, ವೀರಗಾಸೆ, ನಂದಿಧ್ವಜ , ಕೋಲಾಟ, ಗೊಂಬೆ ಪ್ರದರ್ಶನ, ಹಕ್ಕಿ ಪಿಕ್ಕಿ ಕುಣಿತ ಸೇರಿದಂತೆ ನಾನಾ ಸಾಂಸ್ಕೃತಿಕ ಕಲಾ ತಂಡಗಳು ಭಾಗವಹಿಸಲಿವೆ ಎಂದರು.
ವೇದಿಕೆ ಕಾರ್ಯಕ್ರಮವನ್ನು ಶಾಸಕ ನಾರಾಭರತರೆಡ್ಡಿ ಉದ್ಘಾಟಿಸಲಿದ್ದಾರೆ. ಸಮಾರೋಪ ಕಾರ್ಯಕ್ರಮಕ್ಕೆ ಮಾಜಿ ಶಾಸಕ ಸೂರ್ಯ ನಾರಾಯಣರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರಂಭದಲ್ಲಿ ಹಿಂದೂ ಸ್ಥಾನಿ, ಸುಗಮ ಸಂಗೀತ, ಸಂಗೀತ ವಾದ್ಯಗೋಷ್ಠಿ, ನಾಟಕ, ನೃತ್ಯ, ಹಾಡುಗಾರಿಕೆ ನಾನಾ ರೀತಿಯ ಸಾಂಸ್ಕೃತಿಕ ಪ್ರದರ್ಶನ ನಡೆಯಲಿವೆ. ಅಲ್ಲದೆ, ನಾನಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಿ ಗೌರವಿಸಲಾಗುವುದು. ಮುಂಬರುವ ವರ್ಷದಲ್ಲಿ ವಾರ್ಷಿಕೋತ್ಸವ ತಾಲೂಕು ಕೇಂದ್ರದಲ್ಲಿ ಆಯೋಜಿಸುವ ಚಿಂತನೆಯಿದೆ ಎಂದರು.
ಸಂಘದ ಪದಾಧಿಕಾರಿಗಳಾದ ತಿಪ್ಪೇಸ್ವಾಮಿ, ವೀರೇಶ್ ದಳವಾಯಿ, ಸುಬ್ಬಣ್ಣ, ರಮಣಪ್ಪ ಭಜಂತ್ರಿ, ಅಚ್ಚೊಳ್ಳಿ ಅಮರೇಶ್, ಸುಂಕಣ್ಣ, ಮಂಜುನಾಥ ಗೋವಿಂದವಾಡ, ಕುಮಾರಗೌಡ ಇದ್ದರು.