ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಗೆ ಬರುವ ಭಕ್ತರ ದಾಸೋಹಕ್ಕಾಗಿ ದೇವಸಮುದ್ರ ಗ್ರಾಮದ ಮಹಿಳೆಯರು ರೊಟ್ಟಿ ತಯಾರಿಸುತ್ತಿರುವುದು.
- 25ಸಾವಿರ ರೊಟ್ಟಿ
- ಗವಿಸಿದ್ದೇಶ್ವರ
ಅಜ್ಜನ ಜಾತ್ರೆಗೆ 25ಸಾವಿರ ರೊಟ್ಟಿ
ಕಂಪ್ಲಿ: ಕೊಪ್ಪಳ ಗವಿಸಿದ್ದೇಶ್ವರ ಅಜ್ಜನ ಜಾತ್ರೆಗೆ ಬರುವ ಭಕ್ತರ ದಾಸೋಹಕ್ಕಾಗಿ ದೇವಸಮುದ್ರದ ಶ್ರೀ ತುರುಮುಂದಿ ಬಸವೇಶ್ವರ ಯುವಕ ಮಂಡಳಿ ನೇತೃತ್ವದಲ್ಲಿ 25 ಸಾವಿರ ಜೋಳದ ರೊಟ್ಟಿ, 5 ಕ್ವಿಂಟಾಲ್ ಅಕ್ಕಿ ಸಂಗ್ರಹಿಸಿ ಕಳುಹಿಸಲಾಗುತ್ತಿದೆ.
ಜನವರಿ ಐದರಿಂದ ಜಾತ್ರೆ ನಡೆಯಲಿದ್ದು, ದೇವಸಮುದ್ರ ಗ್ರಾಮದ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದ ಆವರಣದಲ್ಲಿ ಕಳೆದ 4 ದಿನಗಳಿಂದ ಸರ್ವಧರ್ಮದ ಮಹಿಳೆಯರು ರೊಟ್ಟಿ ತಯಾರಿಸುತ್ತಿದ್ದಾರೆ. ಕೆಲವರು ಅವರ ಮನೆಯಲ್ಲಿಯೇ ರೊಟ್ಟಿ ತಯಾರಿಸಿ ನೀಡುತ್ತಿದ್ದಾರೆ.
ಮೊದಲು ಐದು ಸಾವಿರ ರೂಟ್ಟಿ ತಯಾರಿಸುವ ಯೋಚನೆ ಇತ್ತು. ಗ್ರಾಮದ ಮಹಿಳೆಯರು ಸ್ವತಃ ರೊಟ್ಟಿ ತಯಾರಿಸಿ ಕೊಡಲು ಮುಂದೆ ಬಂದಿದ್ದರಿಂದ ಈಗಾಗಲೇ 15 ಸಾವಿರಕ್ಕೂ ಹೆಚ್ಚು ರೊಟ್ಟಿ ಸಂಗ್ರಹಿಸಲಾಗಿದೆ. 25 ಸಾವಿರ ರೊಟ್ಟಿ ಕಳುಹಿಸುವ ಸಂಕಲ್ಪ ಇದೆ.
ಜ.2ರಿಂದ ಗ್ರಾಮದ ಯುವಕರು ಪಾದಯಾತ್ರೆ ಮೂಲಕ ಕೊಪ್ಪಳದ ಗವಿಮಠಕ್ಕೆ ತೆರಳಿ ಎರಡು ದಿನ ವಾಸ್ತವ್ಯ ಹೂಡಿ ಅಜ್ಜನ ಸೇವೆ ಮಾಡಲಿದ್ದಾರೆ ಎಂದು ತುರುಮುಂದಿ ಬಸವೇಶ್ವರ ಯುವಕ ಮಂಡಳಿಯ ಪದಾಧಿಕಾರಿಗಳು ತಿಳಿಸಿದರು. ಪ್ರಮುಖರಾದ ಜಿ.ಅಮರೇಗೌಡ, ಗುಡ್ಡದ ಜಂಬುನಾಥ, ಅಳ್ಳಳ್ಳಿ ಮಂಜುನಾಥ, ಅಗಸಿ ಬಸವನಗೌಡ, ಎಚ್.ಎಸ್.ಮಲ್ಲಿಕಾರ್ಜುನ, ಎಸ್.ಚಿದಾನಂದಪ್ಪ, ರುದ್ರಗೌಡ, ಜೆ.ಚನ್ನವೀರ ಇತರರಿದ್ದರು.