ಬಳ್ಳಾರಿಯ ಎಪಿಎಂಸಿ ಠಾಣೆ ವ್ಯಾಪ್ತಿಯಲ್ಲಿ ಮದ್ಯ ಸೇವನೆಯಲ್ಲಿ ತೊಡಗಿದ್ದ ಇಬ್ಬರ ಯುವಕರನ್ನು ಪೊಲೀಸರು ಬಂಧಿಸಿದರು. ಠಾಣಾ ಪಿಎಸ್‌ಐ ಎಸ್.ರಫೀಕ್, ಸಿಬ್ಬಂದಿ ಮಹೇಶ್ವರ ಗೌಡ, ರುದ್ರೇಶ್ ಇತರರಿದ್ದರು.
- ಏಕಕಾಲದಲ್ಲಿ ದಾಳಿ
- ಸಾರ್ವಜನಿಕರಿಂದ ದೂರು
ಬಳ್ಳಾರಿ : ನಗರ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಹಾಗೂ ಮಾದಕ ವಸ್ತು (ಡ್ರಗ್ಸ್) ಸೇವನೆ ಮಾಡುವವರನ್ನು ಪತ್ತೆಹಚ್ಚಲು ಜಿಲ್ಲಾ ಪೊಲೀಸ್ ಇಲಾಖೆ ಎರಡು ದಿನಗಳವರೆಗೆ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಾಚರಣೆಯಲ್ಲಿ ಒಟ್ಟು 174 ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಡಾ.ಸುಮನ್ ಡಿ ಪನ್ನೇಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಸ್ತೆ ಬದಿಗಳಲ್ಲಿ ಮದ್ಯಪಾನ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದವರ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಪೊಲೀಸರು ನಗರದ ವಿವಿಧೆಡೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಈ ವೇಳೆ ವಶಕ್ಕೆ ಪಡೆಯಲಾದ 174 ವ್ಯಕ್ತಿಗಳ ಪೈಕಿ, ಮಾದಕ ವಸ್ತು ಸೇವಿಸಿರುವ ಶಂಕೆ ಮೇರೆಗೆ 111 ಜನರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ವೈದ್ಯಕೀಯ ತಪಾಸಣೆಯ ವರದಿಯಲ್ಲಿ ನಾಲ್ವರು ಮಾದಕ ವಸ್ತು (ಡ್ರಗ್ಸ್) ಸೇವಿಸಿರುವುದು ಧೃಡಪಟ್ಟಿದೆ.
ಈ ಹಿನ್ನೆಲೆಯಲ್ಲಿ ಆ ನಾಲ್ಕೂ ಜನ ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇನ್ನುಳಿದ 170 ಜನರ ವಿರುದ್ಧ ಕರ್ನಾಟಕ ರಾಜ್ಯ ಪೊಲೀಸ್ ಕಾಯ್ದೆಯಡಿಯಲ್ಲಿ ಲಘು ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ನಗರದ ರಸ್ತೆ ಬದಿ, ಸಾರ್ವಜನಿಕ ಉದ್ಯಾನವನ, ಶಾಲಾ ಮೈದಾನ ಹಾಗೂ ನಗರದ ಹೊರವಲಯದ ಖಾಸಗಿ ಲೇಔಟ್‌ಗಳಲ್ಲಿ ಗುಂಪು ಸೇರಿ ಮದ್ಯಪಾನ ಮತ್ತು ಮಾದಕ ವಸ್ತುಗಳನ್ನು ಸೇವಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಇಂತಹ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.