ಬಳ್ಳಾರಿಯ ಮೆಸೋನಿಕ್ ಹಾಲ್‌ನ ಮುಂಭಾಗದ ಸರ್ಕಾರಿ ಭೂಮಿಯನ್ನು ವಶಪಡಿಸಿಕೊಂಡರು. ಎಡಿಸಿ ಮಹಮ್ಮದ್ ಎನ್.ಜುಬೇರ್, ಎಸಿ ಎಚ್.ಡಿ.ರಾಜೇಶ್, ತಹಸೀಲ್ದಾರ್ ಟಿ.ರೇಖಾ, ಡಿಡಿಎಲ್‌ಆರ್ ಪ್ರಮೋದ್ ಇದ್ದರು. 
ಬಳ್ಳಾರಿ

506 ಕೋಟಿ ರೂ. ಮೌಲ್ಯದ 105 ಎಕರೆ ವಶ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಭೂ ಗಳ್ಳರಿಂದ ಜಿಲ್ಲಾಡಳಿತ ಆಸ್ತಿ ರಕ್ಷಣೆ
  • ಅಧಿಕಾರಿಗಳ ಕಾರ್ಯಕ್ಕೆ ಶ್ಲಾಘನೆ
ಬಳ್ಳಾರಿ : ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ನಿವೇಶನ ಮತ್ತು ಜಮೀನುಗಳ ಮೇಲೆ ಭೂಗಳ್ಳರ ಕಣ್ಣು ಬಿದ್ದಿರುವ ಕಾರಣ ಎಚ್ಚೇತ್ತುಕೊಂಡಿರುವ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಿತ್ತು. ಅದರಂತೆ ಕಳೆದ ಎರಡು ತಿಂಗಳಲ್ಲಿ ಒಂಬತ್ತು ತೆರವು ಕಾರ್ಯಾಚರಣೆಯಲ್ಲಿ 506 ಕೋಟಿ ರೂ. ಮೌಲ್ಯದ 105.39 ಎಕರೆ ವಶಪಡಿಸಿಕೊಳ್ಳಲಾಗಿದೆ.
ಈ ನಿಟ್ಟಿನಲ್ಲಿ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ನಿವೇಶನ ಹಾಗೂ ಆಸ್ತಿಗಳ ಗಡಿ ಗುರುತಿಸಿ ಅಧಿಕಾರಿಗಳು, ಸಿಬ್ಬಂದಿ ನಾಮಫಲಕ ಅಳವಡಿಕೆಯಲ್ಲಿ ತೊಡಗಿದ್ದಾರೆ. ಪ್ರಮುಖವಾಗಿ ಬಳ್ಳಾರಿ ನಗರ ಹಾಗೂ ಹೊರವಲಯದ ಪ್ರದೇಶದ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆಸ್ತಿಗಳ ರಕ್ಷಣೆಗೆ ಒತ್ತು ಕೊಟ್ಟು ಸಂರಕ್ಷಣೆಗೆ ಕ್ರಮವಹಿಸಲಾಗುತ್ತಿದೆ.
ಎಲ್ಲೆಲ್ಲಿ : ಹೊರವಲಯದ ಬಂಡಿಹಟ್ಟಿಯ ಟಿ.ಎಸ್.ನಂ. 318ರಲ್ಲಿ 10.17 ಕೋಟಿ ರೂ. ಮೌಲ್ಯದ 3.13 ಎಕರೆ, ಹವಂಬಾವಿಯ ಸ.ನಂ.274ರಲ್ಲಿ 3.83 ಕೋಟಿ ರೂ. ಮೌಲ್ಯದ 0.22 ಸೆಂಟ್ಸ್, ನಲ್ಲಚೆರವು ಪ್ರದೇಶ ಟಿ.ಎಸ್.ನಂ. 958ರಲ್ಲಿ 23.58 ಕೋಟಿ ರೂ. ಮೌಲ್ಯದ 3 ಎಕರೆ, ಭತ್ರಿ ಪ್ರದೇಶದ ಸ.ನಂ. 310/2 ರಲ್ಲಿ 87.50 ಲಕ್ಷ ರೂ. ಮೌಲ್ಯದ 1.25 ಎಕರೆ, ಅಂದ್ರಾಳ್‌ನಲ್ಲಿ ಸ.ನಂ.101/ಎ ರಲ್ಲಿ 49.18 ಕೋಟಿ ರೂ. ಮೌಲ್ಯದ 49.29 ಎಕರೆ, ರೂಪನಗುಡಿ ರಸ್ತೆಯ ಸ.ನಂ.813ರಲ್ಲಿ 28.44 ಕೋಟಿ ರೂ. ಮೌಲ್ಯದ 1.13 ಎಕರೆ, ಶಾಂತಿನಗರ ಸ.ನಂ. 976 ಹಾಗೂ 977ರಲ್ಲಿ 41.17 ಕೋಟಿ ರೂ. ಮೌಲ್ಯದ 13.92 ಎಕರೆ, ಕೋಟೆ ಪ್ರದೇಶದ ಟಿ.ಎಸ್.ನಂ. 94 ರಲ್ಲಿ 5.92 ಕೋಟಿ ರೂ. ಮೌಲ್ಯದ 0.40 ಸೆಂಟ್ಸ್,
ನಲ್ಲಚೆರವು ಪ್ರದೇಶದ ಟಿ.ಎಸ್.ನಂ.941,943,945ರಲ್ಲಿ 42.07 ಕೋಟಿ ರೂ. ಮೌಲ್ಯದ 4.83 ಎಕರೆ, ಹವಂಬಾವಿಯ ಸ.ನಂ.348ರಲ್ಲಿ 176.70 ಕೋಟಿ ರೂ. ಮೌಲ್ಯದ 11.59 ಎಕರೆ, ಕಾರ್ಕಲ ತೋಟದ ಸ.ನಂ.26ರಲ್ಲಿ 22.79 ಕೋಟಿ ರೂ. ಮೌಲ್ಯದ 3.27 ಎಕರೆ, ಕಾರ್ಕಲತೋಟದ ಸ.ನಂ. 125ರ ಪೈಕಿ 41.13 ಕೋಟಿ ರೂ. ಮೌಲ್ಯದ 7.87 ಕೋಟಿ ರೂ. ಬಿ.ಡಿ.ಕ್ವಾಟ್ರಸ್‌ನ ಟಿ.ಎಸ್.ನಂ. 1057/1ರಲ್ಲಿ 42.56 ಲಕ್ಷ ರೂ. ಮೌಲ್ಯದ 0.574 ಸೆಂಟ್ಸ್ ,
ಕಮೇಲಿ ರಸ್ತೆಯ ಟಿ.ಎಸ್. ನಂ. 326/3ಬಿರಲ್ಲಿ 78.40 ಲಕ್ಷ ರೂ. ಮೌಲ್ಯದ 0.45 ಸೆಂಟ್ಸ್, ಮೆಸೋನಿಕ್ ಹಾಲ್‌ನ ಟಿ.ಎಸ್. ನಂ. 102ರಲ್ಲಿ 58.02 ಕೋಟಿ ರೂ. ಮೌಲ್ಯದ 4.44 ಎಕರೆ ಭೂಮಿ ಸೇರಿದಂತೆ ಒಟ್ಟಾರೆ ಒಂಬತ್ತು ಕಾರ್ಯಾಚರಣೆಯಲ್ಲಿ 506.25 ಕೋಟಿ ರೂ. ಮೌಲ್ಯದ 105.39 ಎಕರೆ ಸರ್ಕಾರಿ ಭೂಮಿ ವಶಪಡಿಸಿಕೊಳ್ಳಲಾಗಿದೆ. ಜಿಲ್ಲಾಡಳಿತ ಅಧಿಕಾರಿಗಳ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಧಿಕಾರಿ ವರ್ಗಾವಣೆ ತಡೆ : ಜಿಲ್ಲೆಯಲ್ಲಿ ಪ್ರಭಾವಿಗಳ ಆಸ್ತಿಗೆ ಧಕ್ಕೆಯಾಗುತ್ತಿದ್ದಂತಯೇ ಪ್ರಾಮಾಣಿಕ ಅಧಿಕಾರಿಯನ್ನು ಎತ್ತಂಗಡಿ ಮಾಡಿ, ಭೂ ಅಕ್ರಮದ ಆರೋಪ ಹೊತ್ತಿರುವ ಅಧಿಕಾರಿಯನ್ನೇ ಆ ಸ್ಥಾನಕ್ಕೆ ತರಲು ತೆರೆಮರೆಯ ಕಸರತ್ತು ಶುರುವಾಗಿತ್ತು. ವಿಜಯವಾಣಿಯೂ ‘ಆಸ್ತಿ ರಕ್ಷಣೆಗೆ ವರ್ಗಾವಣೆ ಅಸ್ತ್ರ !’ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿದ ಕೂಡಲೇ ಅಧಿಕಾರಿ ವರ್ಗಾವಣೆ ಮಾಡದಂತೆ ತಡೆಗೆ ಸೂಚಿಸಿತು. ಆದ್ದರಿಂದ, ಕಳೆದ ಎರಡು ತಿಂಗಳಲ್ಲಿ 506 ಕೋಟಿ ರೂ. ಮೌಲ್ಯದ ಸರ್ಕಾರಿ ಭೂಮಿ ವಶವಾಗಿದೆ ಎಂದು ವಿಜಯವಾಣಿ ವರದಿ ಬಗ್ಗೆ ಮೇಲ ಅಧಿಕಾರಿಯೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಭಾವಿ ವ್ಯಕ್ತಿಯ ತೆರವು : ಕಳೆದ ಕೆಲ ದಿನಗಳಿಂದ ಕಾರ್ಕಲ ತೋಟದಲ್ಲಿ ಪಾಲಿಕೆ ಸದಸ್ಯೆ ಪತಿಯೊಬ್ಬ ಸರ್ಕಾರಿ ಭೂಮಿ ಒತ್ತುವರಿ ಮಾಡಿ, ಬಡಾವಣೆ ನಿರ್ಮಿಸಿ ಲಕ್ಷಾಂತರ ರೂ. ಮಾರಾಟ ಮಾಡಿದ್ದರು. ಅದನ್ನು ಜಿಲ್ಲಾಡಳಿತ ವಶಪಡಿಸಿಕೊಂಡು ತೆರವುಗೊಳಿಸಿ ಪ್ರಕರಣ ದಾಖಲಿಸಿತ್ತು. ಸದ್ಯ ಅದರಂತೆ ರಾಜಕೀಯ ಮುಖಂಡರೊಬ್ಬರು ನಗರದಲ್ಲಿಯೇ ಎರಡು ಎಕರೆಗೂ ಅಧಿಕ ಭೂಮಿ ಒತ್ತುವರಿ ಮಾಡಿ ಬಡಾವಣೆ ನಿರ್ಮಿಸಿದ್ದಾರೆ. ಅದರ ದಾಖಲೆಗಳಲ್ಲೆವೂ ಜಿಲ್ಲಾಡಳಿತ ಸಂಗ್ರಹಿಸಿದ್ದೂ, ಇನ್ನೂ ಎರಡು ದಿನಗಳಲ್ಲಿ ತೆರವಿಗೆ ಮುಂದಾಗಲಿದೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿದವು.
"

ಕೋಟ್... ನಗರದ ಮಾತ್ರವಲ್ಲದೇ ಗ್ರಾಮೀಣ ಭಾಗದಲ್ಲೂ ಸರ್ಕಾರಿ ಭೂಮಿ ಒತ್ತುವರಿಯಾಗಿರುವ ಬಗ್ಗೆ ಗಮನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಗ್ರಾಮೀಣದಲ್ಲಿಯೂ ತೆರವು ಮಾಡಲಾಗುವುದು.- ಮಹಮ್ಮದ್ ಎನ್.ಜುಬೇರ್, ಎಡಿಸಿ, ಬಳ್ಳಾರಿ.