ಜಿಲ್ಲೆ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಥಳ ಪರಿಶೀಲನೆ

ಬಳ್ಳಾರಿ : ಗಣಿನಾಡು ಬಳ್ಳಾರಿಯಲ್ಲಿ ಜರುಗಲಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆ ಭರದಿಂದ ಜರುಗಿದ್ದು, ಏ.15ರಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಿಂದ ಸ್ಥಳ ಪರಿಶೀಲನೆ ನಡೆಯಲಿದೆ.

ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ನಿರ್ದಿಷ್ಟ ಸ್ಥಳವನ್ನು ಗುರುತಿಸಲು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಷಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಅಲ್ಲದೆ, ಜಿಲ್ಲೆಯ ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಜತೆ ಸಭೆ ನಡೆಸಿ ಸಲಹೆಗಳನ್ನು ಪಡೆಯಲಿದ್ದಾರೆ.

ಮೂರು ಕಡೆ ಸ್ಥಳ ಗುರುತು : ಇಲ್ಲಿನ ಹೊರವಲಯದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಳಿ 75 ಎಕರೆ ಪ್ರದೇಶ, ಕಪ್ಪಗಲ್ ರಸ್ತೆಯಲ್ಲಿನ 35 ಎಕರೆ ಹಾಗೂ ಕೊಳಗಲ್ ರಸ್ತೆಯ ವಿಮಾನ ನಿಲ್ದಾಣ ಬಳಿಯ 30 ಎಕರೆ ಜಾಗವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಗುರುತಿಸಿದ್ದಾರೆ. ಕೊಳಗಲ್ ಹಾಗೂ ಕಪ್ಲಗಲ್ ರಸ್ತೆ ಬಳಿಯ ಜಾಗವು ಕಡಿಮೆ ಎಕರೆ ಪ್ರದೇಶ ಹೊಂದಿದೆ. ಅಲ್ಲದೆ, ಈ ಸ್ಥಳಗಳಿಗೆ ನಗರದಿಂದನೇ ಗಣ್ಯರು ಹಾಗೂ ಕನ್ನಡ ಪ್ರೇಮಿಗಳು ಸಂಚಾರಿಸಬೇಕಾಗುವುದರಿಂದ ಟ್ರಾಫಿಕ್ ಸಮಸ್ಯೆ ಮತ್ತು ಪಾರ್ಕಿಂಗ್‌ಗೆ ಸ್ಥಳದ ಅಭಾವ ಕಾಡಲಿದೆ. ಆದ್ದರಿಂದ, ನಗರದ ಹೊರವಲಯದ ವಿಎಸ್‌ಕೆ ವಿವಿ ಬಳಿ ವಿಶಾಲವಾದ ಖಾಲಿ ಪ್ರದೇಶವಿದೆ. ಆದರೆ, ಕಾರ್ಯಕ್ರಮ ತೆರಳಲು ಒನ್‌ವೇ ರಸ್ತೆಯಿರುವುದರಿಂದ ಸವಾರರು ಸಂಚಾರಕ್ಕೆ ತೊಂದರೆ ಪಡಲಿದ್ದಾರೆ. ಯಾವ ಸ್ಥಳದಲ್ಲೇ ಕಾರ್ಯಕ್ರಮ ನಡೆದರೂ ಕನ್ನಡ ಪ್ರೇಮಿಗಳಿಗೆ ಅನನೂಕೂಲ ಆಗದೆ ಇರುವಂತೆ ನೋಡಿಕೊಳ್ಳುವ ಹೊಣೆಯಾಗಿದೆ. ಆದ್ದರಿಂದ, ಏ. 15ರಂದು ಮೂರು ಕಡೆ ಸ್ಥಳ ಪರಿಶೀಲನೆ ಬಳಿಕ ರಾಜ್ಯಾಧ್ಯಕ್ಷ ಹಾಗೂ ಜಿಲ್ಲಾಧಿಕಾರಿಗಳು ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ. ಸಮ್ಮೇಳನದ ತಯಾರಿ ಹಿನ್ನೆಲೆಯಲ್ಲಿ ಏ.27ರಂದು ಸಂಡೂರು ತಾಲೂಕು ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ಬಳಿ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರ ಸಾಮಾನ್ಯ ಸಭೆ ನಡೆಯಲಿದೆ. ಪರಿಷತ್ತಿನ ರಾಜ್ಯಾಧ್ಯಕ್ಷರು ಸೇರಿದಂತೆ ಇತರ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಸಮ್ಮೇಳನದ ಮಹತ್ವ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಶಾಲಾ - ಕಾಲೇಜುಗಳಿಗೆ ಭೇಟಿ ನೀಡುತ್ತಿರುವ ಪರಿಷತ್ತಿನ ಪದಾಧಿಕಾರಿಗಳು, ವಿದ್ಯಾರ್ಥಿಗಳಿಗೆ ಸಮ್ಮೇಳನದ ಮನವರಿಕೆ ಮಾಡಿಕೊಡುತ್ತಿದ್ದಾರೆ.

ವಸತಿ ವ್ಯವಸ್ಥೆಯಿದೆ ಚಿಂತೆ : ಜಿಲ್ಲೆಯಲ್ಲಿ ಮೂರು ದಿನಗಳವರೆಗೆ ನಡೆಯುವ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಗಣ್ಯರಿಗೆ ವಸತಿ ವ್ಯವಸ್ಥೆಯಿದೆ ಚಿಂತೆಯಾಗಿದೆ. ನಗರದಲ್ಲಿ ಬೆರಣಿಕೆಯಷ್ಟೇ ಐಷಾರಾಮಿ ಹೊಟೇಲ್‌ಗಳಿದ್ದು, ಎಲ್ಲ ಗಣ್ಯರಿಗೆ ವಸತಿಗೆ ದೊರೆಯುವುದು ತೀರಾ ಕಡಿಮೆಯಾಗಿದೆ. ಆದ್ದರಿಂದ, ಪ್ರಮುಖರಿಗೆ ವಸತಿ ವ್ಯವಸ್ಥೆಗೆ ಹೊಸಪೇಟೆಯಲ್ಲಿ ಹುಡುಕಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಬಹುದು. ಆದ್ದರಿಂದ, ಈಗಿನಿಂದಲೇ ಯಾವ ಗಣ್ಯರಿಗೆ ಎಲ್ಲಿ ವ್ಯವಸ್ಥೆ ಮಾಡಬೇಕು ಎಂದು ರಾಜ್ಯಾಧ್ಯಕ್ಷರ ಜತೆ ಚರ್ಚಿಸಲು ಪದಾಧಿಕಾರಿಗಳು ತಿರ್ಮಾನಿಸಲಿದ್ದಾರೆ.

ಕೋಟ್.... ಏ.15 ರಂದು ಕಸಾಪ ರಾಜ್ಯಾಧ್ಯಕ್ಷರು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಸಮ್ಮೇಳನದ ಸ್ಥಳ, ವಸತಿ ಹಾಗೂ ಮಹತ್ವದ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ. ಜಿಲ್ಲೆಯ ಸಂಘ, ಸಂಸ್ಥೆಯ ಪ್ರಮುಖರು ಭಾಗವಹಿಸಬೇಕು.

- ನಿಷ್ಠಿ ರುದ್ರಪ್ಪ, ಜಿಲ್ಲಾಧ್ಯಕ್ಷ, ಕಸಾಪ, ಬಳ್ಳಾರಿ.