ಜಿಲ್ಲೆ

ವಿವಿಯಿಂದ ಅಂಕಪಟ್ಟಿ ವಿತರಣೆ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ಇಲ್ಲಿನ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವ ವಿದ್ಯಾಲಯ ವ್ಯಾಪ್ತಿಯ ಪದವಿಯ ವಿದ್ಯಾರ್ಥಿಗಳಿಗೆ ಮೂರು ವರ್ಷಗಳ ಬಳಿಕ ಅಂಕಪಟ್ಟಿ ವಿತರಿಸಲು ಮುಂದಾಗಿದೆ.

ಬಳ್ಳಾರಿ, ವಿಜಯನಗರ ಹಾಗೂ ಕೊಪ್ಪಳ ಸೇರಿದಂತೆ ಒಟ್ಟು 80ಕ್ಕೂ ಅಧಿಕ ಪದವಿ ಕಾಲೇಜುಗಳು ವಿವಿ ವ್ಯಾಪ್ತಿಗೆ ಒಳಪಡುತ್ತವೆ. 2022ನೇ ಸಾಲಿನಿಂದ ಪದವಿ ಪೂರ್ಣಗೊಳಿಸಿದ ಹಾಗೂ ಸದ್ಯ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿವಿಧ ಕಾರಣಗಳ ನೆಪವೊಡ್ಡಿ ಈವರೆಗೂ ಅಂಕಪಟ್ಟಿ ನೀಡುವಲ್ಲಿ ವಿವಿ ವೈಫಲ್ಯವಾಗಿತ್ತು. ಇದರಿಂದ ವಿದ್ಯಾರ್ಥಿಗಳಿಗೆ ಬೇರೆ ವಿವಿಗಳಲ್ಲಿ ಉನ್ನತ ಶಿಕ್ಷಣಕ್ಕೆ ಪ್ರವೇಶ ಹಾಗೂ ವಿವಿಧ ಕಂಪನಿಗಳಲ್ಲಿ ಉದ್ಯೋಗ ಕೈಗೊಳ್ಳಲು ಪಡೆಯಲು ಹರಸಾಹಸ ಪಡಬೇಕಾಗಿತ್ತು. ಇದರ ಬಗ್ಗೆ ಹಲವು ಬಾರಿ ವಿವಿ ಗಮನಕ್ಕೂ ತಂದರೂ ಯಾವುದೇ ಕ್ರಮವಹಿಸದೆ ಕಾಲಹರಣ ಮಾಡುತ್ತಿದೆ ಎಂಬ ಆರೋಪ ವಿದ್ಯಾರ್ಥಿಗಳಿಂದ ಬಲವಾಗಿ ಕೇಳಿಬಂದಿತ್ತು. ಅಲ್ಲದೆ, ಈವರೆಗೂ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಬೇರೆ ವಿವಿಗಳಲ್ಲಿ ಪ್ರವೇಶ ಪಡೆಯುವ ವೇಳೆ ಆಯಾ ಕಾಲೇಜಿನ ಪ್ರಾಚಾರ್ಯರು ಆನ್‌ಲೈನ್‌ನಲ್ಲಿ ಪಡೆದಿದ್ದ ಅಂಕಪಟ್ಟಿಯ ಪ್ರತಿಗೆ ಸಹಿ ಹಾಗೂ ಕಾಲೇಜು ಸೀಲ್ ಹಾಕಿ ಕಳುಹಿಸುತ್ತಿದ್ದರು.

1.50 ಲಕ್ಷ ಅಂಕಪಟ್ಟಿಗಳು ವಿತರಣೆ : ಕೆಲ ವರ್ಷಗಳ ಹಿಂದ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ವಿತರಣೆಯ ವಿಳಂಬಕ್ಕೆ ಮುಖ್ಯವಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿದ್ದ ಯುಯುಸಿಎಂಎಸ್ ತಂತ್ರಜ್ಞಾನದಲ್ಲಿ ನ್ಯೂನತೆಯ ಮುಖ್ಯ ಕಾರಣವಾಗಿದೆ. ಸದ್ಯ ಯುಯುಸಿಎಂಎಸ್‌ನಲ್ಲಿ ಸಮಸ್ಯೆ ಸರಿಪಡಿಸಲಾಗಿದೆ. ಸದ್ಯ ಮೂರು ವರ್ಷದಿಂದ ವಿವಿಯಲ್ಲಿ ಒಟ್ಟು 3.25 ಲಕ್ಷ ಅಂಕಪಟ್ಟಿಗಳನ್ನು ಮುದ್ರಿಸಿ ವಿದ್ಯಾರ್ಥಿಗಳಿಗೆ ವಿತರಿಸಬೇಕಿತ್ತು. ಆದರೆ, ಸದ್ಯ 1.50 ಲಕ್ಷ ಅಂಕಪಟ್ಟಿಗಳನ್ನು ಮುದ್ರಿಸಲಾಗಿದೆ. ಇನ್ನೂ 1.75 ಲಕ್ಷ ಅಂಕಪಟ್ಟಿಗಳ ಮುದ್ರಿಸಿಬೇಕಿದೆ. ಇನ್ನೂ ಎರಡ್ಮೂರು ವಾರಗಳಲ್ಲಿ ಎಲ್ಲ ಅಂಕಪಟ್ಟಿಗಳನ್ನು ಮುದ್ರಿಸಿ ವಿತರಿಸಲಿದೆ. ಅಲ್ಲದೆ, ವಿವಿಯ ವ್ಯಾಪ್ತಿಯ ಆಯಾ ಕಾಲೇಜುಗಳ ವಿಳಾಸಕ್ಕೆ ಪೋಸ್ಟ್ ಮೂಲಕ ಕಳುಹಿಸಲಾಗುತ್ತಿದೆ. ಸದ್ಯ ಅಂಕಪಟ್ಟಿಗೆ ಮುದ್ರಣಗೊಂಡಿರುವ ಒಂದು ಕಾಗದದ ಬೆಲೆ ಎಷ್ಟು ಎಂಬುದಾಗಿ ಮೌಲ್ಯಮಾಪನ ಕುಲಸಚಿವರನ್ನು ವಿಜಯವಾಣಿ ಪ್ರಶ್ನಿಸಿದ ವೇಳೆ ಈ ಮುನ್ನ ಮೌಲ್ಯಮಾಪನ ಕುಲಸಚಿವರ ಅಧಿಕಾರವಧಿಯಲ್ಲಿ ಅಂಕಪಟ್ಟಿ ಕಾಗದಗಳನ್ನು ಖರೀದಿಸಲಾಗಿದ್ದು ಅದರ ಬಗ್ಗೆ ಮಾಹಿತಿಲ್ಲ ಎಂದು ಉತ್ತರಿಸಿದರು.

ಪದವಿ ಕಾಲೇಜು ಸಿಬ್ಬಂದಿ ಕೊರತೆ : ಈಗಾಗಲೇ ವಿವಿಯಿಂದ ಒಂದೂವರೆ ಲಕ್ಷ ಅಂಕಪಟ್ಟಿಗಳನ್ನು ಮುದ್ರಿಸಿ ವಿತರಿಸಲು ವಿವಿ ಮುಂದಾಗಿದೆ. ಆದರೆ, ಪ್ರತಿಯೊಂದು ಪದವಿ ಕಾಲೇಜುಗಳ ಸಿಬ್ಬಂದಿಯೂ ವಿವಿಗೆ ಭೇಟಿ ನೀಡಿ ಆಯಾ ಅಂಕಪಟ್ಟಿಗಳಲ್ಲಿ ವಿದ್ಯಾರ್ಥಿಗಳ ಹೆಸರು, ಅಂಕಗಳು ಹಾಗೂ ವಿವರಗಳನ್ನು ಸಲ್ಲಿಸಿ ಪಡೆದುಕೊಂಡು ಹೋಗಬೇಕು ಎಂಬುದಾಗಿ ಸೂಚಿಸುತ್ತಿದೆ. ಆದರೆ, ಪ್ರತಿ ಸಿಬ್ಬಂದಿಯೂ ದಿನಕ್ಕೆ ಎರಡು ನೂರು ಅಂಕಪಟ್ಟಿಗಳಲ್ಲಿ ವಿವರ ಸಲ್ಲಿಸಬಹುದು. ಅಂಕಪಟ್ಟಿಯ ಮುದ್ರಣ ಹಾಗೂ ಕಾಲೇಜುಗಳಿಗೆ ವಿತರಿಸುವ ಜವಾಬ್ದಾರಿ ವಿವಿ ಆಡಳಿತ ಮಂಡಳಿಯಾಗಿರುತ್ತದೆ. ಅದು ಬಿಟ್ಟು ಪದವಿ ಕಾಲೇಜುಗಳ ಸಿಬ್ಬಂದಿಗೆ ಕೆಲಸ ವಹಿಸುತ್ತಿದೆ. ಅಲ್ಲದೆ, ಕೆಲ ದಿನಗಳಲ್ಲೇ ಪದವಿ ಪರೀಕ್ಷೆಗಳು ಆರಂಭ, ಪದವಿಯ ಪ್ರಥಮ ವರ್ಷದ ಪ್ರವೇಶಾತಿ ನಡೆಯುತ್ತಿದ್ದ ಕಾಲೇಜುಗಳಲ್ಲಿ ಸಿಬ್ಬಂದಿ ಕೊರತೆಯಿದೆ. ಇದರ ನಡುವೆ ವಿವಿ ನಿರ್ವಹಿಸಬೇಕಾದ ಕೆಲಸವನ್ನು ಪದವಿ ಕಾಲೇಜುಗಳಿಗೆ ವಹಿಸುತ್ತಿದೆ ಎಂದು ಪದವಿ ಕಾಲೇಜು ಪ್ರಾಚಾರ್ಯರೊಬ್ಬರು ವಿವಿ ವಿರುದ್ಧ ಅಸಮಾಧಾನ ಹೊರಹಾಕಿದರು.

ಅಕ್ರಮದ ಆರೋಪ : ಇಲ್ಲಿನ ವಿಎಸ್‌ಕೆ ವಿವಿಯಲ್ಲಿ ಸರ್ಕಾರದಿಂದ ಕಡಿಮೆ ಮೌಲ್ಯದ ಅಂಕಪಟ್ಟಿಯ ಕಾಗದಗಳನ್ನು ದುಬಾರಿ ಬೆಲೆಗೆ ಖರೀದಿಸಿ ವಿವಿಗೆ ವಂಚಿಸಿದೆ ಎಂಬ ಆರೋಪವಿದೆ. ಇದರ ಬಗ್ಗೆ ವಿವಿ ಸಿಂಡಿಕೇಟ್ ಸದಸ್ಯರು ಸಭೆಯಲ್ಲಿ ಪ್ರಸ್ತಾಪಿಸಿದ್ದರು. ಅಲ್ಲದೆ, ಕುಲಪತಿ ತಂಡ ರಚಿಸಿ ತನಿಖೆ ನಡೆಸಲಾಗುವುದು ಎಂಬುದಾಗಿ ಆದೇಶಿಸಿದ್ದರು. ಆದರೆ, ಈವರೆಗೂ ಅಂಕಪಟ್ಟಿಯ ಕಾಗದದ ಖರೀದಿಯ ಅಕ್ರಮದ ಬಗ್ಗೆ ತಂಡ ವರದಿ ನೀಡಿರುವುದಾಗಿ ಕುಲಪತಿ ಬಹಿರಂಗಪಡಿಸಿಲ್ಲ.

ಕೋಟ್... ಯುಯುಸಿಎಂಎಸ್ ತಂತ್ರಜ್ಞಾನದ ಸಮಸ್ಯೆಯಿಂದ ಅಂಕಪಟ್ಟಿ ವಿತರಿಸಲು ವಿಳಂಬವಾಗಿತ್ತು. ಸದ್ಯ ಅದರಲ್ಲಿರುವ ನೂನ್ಯತೆಯನ್ನು ಸರಿಪಡಿಸಿದ್ದು ಅಂಕಪಟ್ಟಿಯ ಮುದ್ರಣ ನಡೆಯುತ್ತಿದೆ. ಆಯಾ ಪದವಿ ಕಾಲೇಜುಗಳಿಗೆ ಕಳುಹಿಸಲಾಗುತ್ತಿದೆ.

- ಪ್ರೊ.ಎಂ.ಎನ್.ಸಾಲಿ, ಮೌಲ್ಯಮಾಪನ ಕುಲಸಚಿವ, ವಿಎಸ್‌ಕೆ ವಿವಿ, ಬಳ್ಳಾರಿ