ಜಿಲ್ಲೆ

ತಿರಂಗ ಯಾತ್ರೆ ದೇಶದ ಗೌರವ

ಬಳ್ಳಾರಿ ; ಭಾರತೀಯ ಸೈನ್ಯ ಆಪರೇಷನ್ ಸಿಂಧೂರ ಮೂಲಕ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದೆ ಎಂದು ಮಾಜಿ ಶಾಸಕ ಜಿ.ಸೋಮಶೇಖರರೆಡ್ಡಿ ಹೇಳಿದರು.

ನಗರದಲ್ಲಿ ಎಸ್ಪಿ ಕಚೇರಿಯಿಂದ ಗಡಗಿ ಚೆನ್ನಪ್ಪ ವೃತ್ತದವರೆಗೆ ಬಿಜೆಪಿಯಿಂದ ಶನಿವಾರ ಹಮ್ಮಿಕೊಂಡಿದ್ದ ತಿರಂಗ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು. ಆಪರೇಷನ್ ಸಿಂಧೂರದಿಂದ ಜಾಗತಿಕ ಮಟ್ಟದಲ್ಲಿ ಭಾರತದ ಕೀರ್ತಿ ಹೆಚ್ಚಿಸಿದೆ. ತಿರಂಗ ಯಾತ್ರೆಯನ್ನು ಹಮ್ಮಿಕೊಳ್ಳುವ ಮೂಲಕ ಭಾರತೀಯ ಸೈನ್ಯ ಜತೆಗೆ ನಾವು ಇದ್ದೇವೆ ಎಂಬಂತೆ ಬೆಂಬಲ ಸೂಚಿಸಿದ್ದೇವೆ. ಶಾಸಕ ಕೊತ್ತೂರು ಮಂಜುನಾಥ ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ ಬೂಟಾಟಿಕೆಯಾಗಿದೆ ಎಂದು ಕಿಡಿಕಾರಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ ಮೋಕಾ ಮಾತನಾಡಿ, ಪಾಕ್ತಿಸಾನದವರಿಗೆ ಭಾರತದ ತಾಕತ್ತು ಏನು ಎಂಬುದು ತೋರಿಸಿದೆ. ನೂರಕ್ಕೂ ಅಧಿಕ ಉಗ್ರರ ಹತ್ಯೆ ಹಾಗೂ ಒಂಬತ್ತು ಉಗ್ರ ನೆಲೆಗಳನ್ನು ಧ್ವಂಸ ಮಾಡಲಾಗಿದೆ. ಕೇಂದ್ರ ಸರ್ಕಾರ, ಸೈನ್ಯ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಜತೆಗಿದ್ದೇವೆ. ತಿರಂಗ ಯಾತ್ರೆ ದೇಶದ ಗೌರವ, ಭಕ್ತಿಯನ್ನು ಸಾರುವ ಯಾತ್ರೆಯಾಗಿದೆ ಎಂದರು.

ನಗರದ ಎಸ್ಪಿ ಕಚೇರಿಯಿಂದ ಗಡಗಿ ಚೆನ್ನಪ್ಪ ವೃತ್ತದವರೆಗೆ ಬಿಜೆಪಿ ಕಾರ್ಯಕರ್ತರು, ಮಾಜಿ ಸೈನಿಕರು, ನಾಗರಿಕರು ಹಾಗೂ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ ಭಾರತದ ಧ್ವಜ ಹಿಡಿದು ಜೈ ಭಾರತ ಮಾತ ಕೀ ಜೈ ಎಂದು ಘೋಷಣೆ ಕೂಗುತ್ತ ಹೆಜ್ಜೆ ಹಾಕಿದರು.