ಜಿಲ್ಲೆ

ಸಾಮಾಜಿಕ ಪುನರ್ವಸತಿ ಕಲ್ಪಿಸುವಂತೆ ದೇವದಾಸಿಯರ ವಿಮೋಚನಾ ಸಂಘದಿಂದ ಪ್ರತಿಭಟನೆ

ಬಳ್ಳಾರಿ: ತಮಗೆ ಸಾಮಾಜಿಕ ಪುನರ್ವಸತಿ ಕಲ್ಪಿಸಬೇಕೆಂದು ಒತ್ತಾಯಿಸಿ ರಾಜ್ಯ ದೇವದಾಸಿಯರ ವಿಮೋಚನಾ ಸಂಘ ಜಿಲ್ಲಾ ಸಮಿತಿ ಬುಧವಾರ ನಗರದ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಿತು.

ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಮಾಳಮ್ಮ ಮಾತನಾಡಿ, ಸಮಾಜದಲ್ಲಿ ವಿಮುಕ್ತ ದೇವದಾಸಿಯರನ್ನು ನಿಕೃಷ್ಟವಾಗಿ ನೋಡಲಾಗುತ್ತಿದೆ. ತಾವು ಮಾಡದ ತಪ್ಪಿಗೆ ವಿಮುಕ್ತ ದೇವದಾಸಿಯರು ಮತ್ತು ಮಕ್ಕಳು ಶಿಕ್ಷೆ ಅನುಭವಿಸುತ್ತಿದ್ದಾರೆ. ಕುಟುಂಬಗಳು ಸ್ವಾವಲಂಬಿ ಜೀವನ ಕಟ್ಟಿಕೊಳ್ಳುವುದು ಯಾವಾಗ ಎಂಬ ಚಿಂತೆ ತಲೆದೂರಿದೆ. ಇನ್ನಾದರೂ ಸರ್ಕಾರ, ವಿಮುಕ್ತ ದೇವದಾಸಿಯರಿಗೆ ಮಾಸಿಕ ಸಹಾಯಧನವನ್ನು 5 ಸಾವಿರ ರೂ.ಗೆ ಹೆಚ್ಚಿಸಬೇಕು. ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಐದು ಎಕರೆ ಜಮೀನು ಮಂಜೂರು ಮಾಡಬೇಕು. ನಿವೇಶನ ರಹಿತರಿಗೆ ಉಚಿತವಾಗಿ ನಿವೇಶನ ವಿತರಿಸಬೇಕು ಎಂದರು.

ಉದ್ಯೋಗ ಖಾತ್ರಿ ಯೋಜನೆಯಡಿ ಕನಿಷ್ಠ ತಲಾ 200 ದಿನ ಕಡ್ಡಾಯವಾಗಿ ಉದ್ಯೋಗ ನೀಡಬೇಕು. ಇಲ್ಲದಿದ್ದರೆ, ಶೇ.75 ನಿರುದ್ಯೋಗ ಭತ್ಯೆ ಒದಗಿಸಬೇಕು. ಕೂಲಿ ಮೊತ್ತವನ್ನು 700 ರೂ.ಗೆ ಹೆಚ್ಚಿಸಬೇಕು. ಹೋಬಳಿ ಕೇಂದ್ರಗಳಲ್ಲಿ ವೃತ್ತಿ ತರಬೇತಿ ಶಿಬಿರ ಸ್ಥಾಪಿಸಿ, ತಲಾ ಒಬ್ಬರಿಗೆ ಕನಿಷ್ಠ 4 ಸಾವಿರ ರೂ. ವೆಚ್ಚದಲ್ಲಿ ಊಟ-ವಸತಿ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದರು. ಸಂಘಟನೆಯ ಪದಾಧಿಕಾರಿಗಳಾದ ಪಿ.ಚಾಂದಬೀ, ಪುಷ್ಪಾ, ದುರುಗಮ್ಮ, ಯಲ್ಲಮ್ಮ, ಈರಮ್ಮ, ಯಂಕಮ್ಮ, ರುದ್ರೇಶ, ದೊಡ್ಡಬಸಪ್ಪ, ಮೂಗಮ್ಮ, ಎಚ್,ಬಸಪ್ಪ ಇತರರಿದ್ದರು.