ಜಿಲ್ಲೆ

ಶಾಂತರಸ ಕಲ್ಯಾಣ ಕರ್ನಾಟಕದ ಸಾಕ್ಷಿ ಪ್ರಜ್ಞೆ

ಬಳ್ಳಾರಿ ; ಶಾಂತರಸರು ಜನರ ಸಾಮಾನ್ಯ ಸಮಸ್ಯೆಗಳಿಗೆ ತೀವ್ರವಾಗಿ ಸ್ಪಂದಿಸಿ, ಅನ್ಯಾಯದ ವಿರುದ್ಧ ಪ್ರತಿರೋಧವನ್ನು ಒಡ್ಡುತ್ತಲೇ ಕಲ್ಯಾಣ ಕರ್ನಾಟಕದ ಸಾಕ್ಷಿಪ್ರಜ್ಞೆಯಂತಿದ್ದರು ಎಂದು ಮಕ್ಕಳ ಸಾಹಿತಿ

ಡಾ.ಶಿವಲಿಂಗಪ್ಪ ಹಂದಿಹಾಳು ಅಭಿಪ್ರಾಯ ಪಟ್ಟರು.

ನಗರದ ಸರಳಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಬೆಂಗಳೂರಿನ ಸಂಸ ಥಿಯೇಟರ್ ಹಾಗೂ ನಾಟಕ ವಿಭಾಗದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ‘ಶಾಂತರಸರ ಶತಮಾನೋತ್ಸವ ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶಾಂತರಸರ ಶತಮಾನೋತ್ಸವವನ್ನು ನಾಡಿನಾದ್ಯಂತ ಏಕಕಾಲದಲ್ಲಿ ಆಚರಿಸುತ್ತಿರುವುದು ಲೇಖಕರಿಗೆ ನಾಡು ಕೊಟ್ಟ ದೊಡ್ಡ ಗೌರವ. ಶಾಂತರಸರ ಸಾಹಿತ್ಯ, ಸಂಶೋಧನೆ, ಹೋರಾಟ ಮನೋಭಾವ ಎಲ್ಲವೂ ವಿಭಿನ್ನ. ಉರ್ದು ಗಜಲಿನ ತಾಜಾತನ ಕನ್ನಡಕ್ಕೆ ಬರಬೇಕೆಂದು ಹಂಬಲಿಸಿ, ಆ ಮೂಲಕ ಕನ್ನಡದಲ್ಲಿ ಒಂದು ಪರಂಪರೆಯನ್ನು ನಿರ್ಮಾಣ ಮಾಡಿದವರು.

ಮೋಕಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ. ಬಿ. ಜಿ. ಕಲಾವತಿ ಮಾತನಾಡಿ, ಶಾಂತರಸರು ಕಲ್ಯಾಣದ ಕರ್ನಾಟಕಕ್ಕಾಗಿ ಹಗಲಿರುಳು ಶ್ರಮಿಸಿದವರು. ಅವರ ಸಾಹಿತ್ಯವನ್ನು ಓದುತ್ತಾ ಹೋದರೆ ಇಡೀ ಕಲ್ಯಾಣ ಕರ್ನಾಟಕದ ಬಿಸಿಲ ಬದುಕು ತಣ್ಣಗೆ ತೆರೆದುಕೊಳ್ಳುತ್ತದೆ ಎಂದರು.

ಅವರ ಗಜಲುಗಳಲ್ಲಿ ಬಹಳ ಮುಖ್ಯವಾಗಿ ಪ್ರೇಮ ನಿವೇದನೆ, ಸಾಮಾಜಿಕ ಸಂಘರ್ಷ,ವ್ಯವಸ್ಥೆಯ ಅರಾಜಕತೆ, ಮಧುರ ಭಾವ,ಆಧ್ಯಾತ್ಮ ಹಾಸು ಹೊಕ್ಕಾಗಿದೆ ಎಂದು ವಿಶ್ಲೇಷಿಸಿದರು.

ಪ್ರಾಚಾರ್ಯ ಡಾ. ಪ್ರಹ್ಲಾದ್ ಚೌದ್ರಿ ಮಾತಾನಾಡಿ, ಶಾಂತರಸರ ಬದುಕು ತೆರೆದಿಟ್ಟ ಪುಸ್ತಕದಂತಿತ್ತು. ಹೋರಾಟ, ಆಲೋಚನಾ ಕ್ರಮ, ಸಂಸ್ಕೃತಿ ಚಿಂತನೆಗಳಿಂದ ಅವರು ಎಲ್ಲ ಕಾಲದ ಬೆಳಕಾಗಿದ್ದಾರೆ ಎಂದು ಬಣ್ಣಿಸಿದರು.

ಕತೆಗಾರ ವೀರೇಂದ್ರ ರಾವಿಹಾಳ ಶಾಂತರಸರ ವಿಭಿನ್ನ ಆಶಯದ ಗಜಲುಗಳನ್ನು ವಾಚಿಸಿದರು.