ಜಿಲ್ಲೆ

ಇಂದಿನಿಂದ ಬೂತ್‌ಮಟ್ಟದಲ್ಲಿ ವಿಜಯ ಅಭಿಯಾನ: ಬಿಜೆಪಿ ಜಿಲ್ಲಾಧ್ಯಕ್ಷ ಮುರಹರ ಗೌಡ ಮಾಹಿತಿ

ಬಳ್ಳಾರಿ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರಲು ಬೂತ್‌ಮಟ್ಟದಲ್ಲಿ ಜ.2ರಿಂದ 12ರ ವರೆಗೆ ವಿಜಯ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮುರಹರ ಗೌಡ ಹೇಳಿದರು.

ಸಂಘಟನೆಯ ವ್ಯವಸ್ಥೆಯನ್ನು ಕಟ್ಟಕಡೆಯ ಮತಗಟ್ಟೆಯಲ್ಲಿಯೂ ಸಶಕ್ತಗೊಳಿಸಲು ಪ್ರತಿ ಮತಗಟ್ಟೆಯಲ್ಲಿ ಬೂತ್ ವಿಜಯ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅದಕ್ಕೆ ಬೂತ್ ಸಮಿತಿಯ ರಚನೆ, ಪೇಜ್ ಪ್ರಮುಖರ ನಿಯುಕ್ತಿ, ಪ್ರತಿ ಮತಗಟ್ಟೆಯಲ್ಲಿ 25 ಕಾರ್ಯಕರ್ತರ ಮನೆಯ ಮೇಲೆ ಬಿಜೆಪಿ ಧ್ವಜ ಹಾರಿಸುವುದು ಹೀಗೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಭಾನುವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪಕ್ಷದ ಗೆಲುವಿಗೆ ಪೂರಕವಾಗಿ ಕಾರ್ಯಕರ್ತರು ಕೆಲಸ ಮಾಡಬೇಕು. ರಾಜ್ಯಾದ್ಯಂತ 50 ಲಕ್ಷ ಮನೆಗಳಲ್ಲಿ ಬಿಜೆಪಿ ಧ್ವಜ ಹಾರಿಸುವ ಅಭಿಯಾನ ಇದಾಗಿದೆ. ಯುವ ಅರ್ಹ ಕಾರ್ಯಕರ್ತರು ಬೂತ್‌ಗಳಲ್ಲಿ ಶೇ.100 ರಷ್ಟು ಮತದಾನ ಆಗುವ ರೀತಿಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಬೇಕು. ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ಮಂಡಲ ಪದಾಧಿಕಾರಿಗಳು ಪಾಲ್ಗೊಳ್ಳಬೇಕು ಎಂದರು.

ಶಾಸಕ ಸೋಮಶೇಖರ ರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ್ ಕುಮಾರ್, ಶಿವಶಂಕರ್ ರೆಡ್ಡಿ, ಗಾಳಿ ಶಂಕರಪ್ಪ, ವೀರಶೇಖರ್ ರೆಡ್ಡಿ, ವಿರೂಪಾಕ್ಷಗೌಡ, ಡಾ.ಬಿ.ಕೆ.ಸುಂದರ್, ದರೋಜಿ ರಮೇಶ್, ರಾಜೀವ್ ತೊಗರಿ ಇತರರಿದ್ದರು.