ಬಳ್ಳಾರಿ: ಜಿಲ್ಲಾಸ್ಪತ್ರೆಯನ್ನೇ ಕರೊನಾ ಆಸ್ಪತ್ರೆಯಾಗಿ ಮುಂದುವರಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದರು. ನಗರದಲ್ಲಿ ಸುದ್ದಿಗಾರೊಂದಿಗೆ ಮಂಗಳವಾರ ಮಾತನಾಡಿದರು. ಮೇ 3ರ ಬಳಿಕ ಅಂತಾರಾಜ್ಯ, ಜಿಲ್ಲೆಯ ಸಂಚಾರಕ್ಕೆ ಅನುಮತಿ ದೊರೆತರೆ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಬಹುದು. ಹೀಗಾಗಿ ರೋಗಿಗಳು ಚಿಕಿತ್ಸೆಗೆ ಅಲೆದಾಡುವುದನ್ನು ತಪ್ಪಿಸಲು ಜಿಲ್ಲಾಸ್ಪತ್ರೆಯನ್ನೇ ಕರೊನಾ ಆಸ್ಪತ್ರೆಯನ್ನಾಗಿ ಮುಂದುವರಿಸಲಿದ್ದೇವೆ. ಜಿಲ್ಲೆಯಲ್ಲಿ ಸೋಂಕಿತರೊಂದಿಗೆ ಪ್ರಥಮ ಹಾಗೂ ದ್ವಿತೀಯ ಹಂತದ ಸಂಪರ್ಕದ ಮೂಲಕ ಕ್ವಾರಂಟೈನ್‌ನಲ್ಲಿದ್ದ 452 ಜನರನ್ನು ಎರಡು ಬಾರಿ ಪರೀಕ್ಷಿಸಿದ್ದು, ನೆಗೆಟಿವ್ ವರದಿ ಬಂದಿದೆ. ಸದ್ಯ ಅವರು ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆ ಎಂದರು.
ದುರ್ಬಲ ಗುಂಪುಗಳಾದ ಗರ್ಭಿಣಿಯರು, ಕ್ಷಯರೋಗ ಪೀಡಿತರು, ಎಚ್‌ಐವಿ, ಡಯಾಲಿಸಿಸ್ ರೋಗಿಗಳು, ವಯೋವೃದ್ಧರು ಸೇರಿ ಒಟ್ಟು 4,0354 ಜನರನ್ನು ಮನೆ-ಮನೆಗೆ ತೆರಳಿ ಸಮೀಕ್ಷೆ ನಡೆಸಿದ್ದು, ಅವರಲ್ಲಿ 241 ಜನರಿಗೆ ಕೆಮ್ಮು, ಶೀತ, ಜ್ವರದಂತ ಲಕ್ಷಣಗಳು ಕಂಡುಬಂದಿವೆ. ಹೀಗಾಗಿ ಅವರ ಗಂಟಲು ಮತ್ತು ಮೂಗು ದ್ರವ್ಯವನ್ನು ಸಂಗ್ರಹಿಸಲಾಗುತ್ತಿದೆ. ನಗರದ ವಿವಿಧೆಡೆ ತಾತ್ಕಾಲಿಕ ತರಕಾರಿ ಮಾರಾಟದ ವ್ಯವಸ್ಥೆ ಮೇ 3ರವರೆಗೆ ಮುಂದುವರಿಯಲಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಳೆಗೆ 304 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಈ ವಾರದಲ್ಲಿ ರೈತರ ಖಾತೆಗೆ ಪರಿಹಾರ ಹಣ ಜಮಾ ಆಗಲಿದೆ. ಅಕಾಲಿಕ ಮಳೆಯಿಂದ 2,361 ಹೆಕ್ಟೇರ್ ಭತ್ತ ಹಾನಿಯಾಗಿದ್ದು, ಸಿರಗುಪ್ಪ ಒಂದರಲ್ಲಿಯೇ 2,014 ಹೆಕ್ಟೇರ್ ಪ್ರದೇಶ ಹಾನಿಯಾಗಿದೆ ಎಂದು ತಿಳಿಸಿದರು. ಎಸ್ಪಿ ಸಿ.ಕೆ.ಬಾಬಾ, ಎಡಿಸಿ ಮಂಜುನಾಥ, ಡಿಎಚ್‌ಒ ಡಾ.ಜನಾರ್ದನ್ ಇದ್ದರು.
ಕೇಂದ್ರದ ಸೂಚನೆ ಬಳಿಕ ಘೋಷಣೆ
ಯಾವುದೇ ಪ್ರದೇಶದಲ್ಲಿ ಸೋಂಕಿತರು ಕಂಡು ಬಂದ 28 ದಿನದ ಬಳಿಕ ಹೊಸ ಸೋಂಕಿತರು ಪತ್ತೆಯಾಗದಿದ್ದರೆ ಅದನ್ನು ಸೋಂಕು ಮುಕ್ತ ಪ್ರದೇಶವೆಂದು ಘೋಷಿಸಬಹುದು.ಏ.5ರ ಬಳಿಕ ಯಾರಲ್ಲಿಯೂ ಸೋಂಕು ಕಂಡು ಬಂದಿಲ್ಲ. 28 ದಿನಗಳ ಬಳಿಕ ಈ ಎಲ್ಲ ಪ್ರದೇಶಗಳನ್ನು ಸೋಂಕು ಮುಕ್ತ ಪ್ರದೇಶಗಳೆಂದು ಘೋಷಿಸಿಬಹುದಾಗಿದೆ. ಹೀಗಾಗಿ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗಿದೆ. ಸರ್ಕಾರ ಅನುಮತಿ ನೀಡಿದ ತಕ್ಷಣ ಸೋಂಕು ಮುಕ್ತ ಪ್ರದೇಶವೆಂದು ಘೋಷಿಸಲಾಗುವುದು ಎಂದು ಡಿಸಿ ನಕುಲ್ ತಿಳಿಸಿದರು.