ಜಿಲ್ಲೆ

ಬಳ್ಳಾರಿಯಲ್ಲಿ ಅಧಿದೇವತೆ ಕನಕದುರ್ಗಮ್ಮ ದೇವಿ ಸಿಡಿಬಂಡಿ ಉತ್ಸವ

Ballari

ಬಳ್ಳಾರಿ: ನಗರದ ಕನಕ ದುರ್ಗಮ್ಮ ದೇವಿಯ ಮಹಿಮೆ ರಾಜ್ಯ, ಹೊರ ರಾಜ್ಯದಲ್ಲೂ ಪಸರಿಸಿದೆ. ಮಾ.3ರಂದು ಸಂಜೆ 5.30ಕ್ಕೆ ಕನಕ ದುರ್ಗಮ್ಮ ದೇವಿಯ ಸಿಡಿಬಂಡಿ ಉತ್ಸವ ಇದೆ. ಶಿವರಾತ್ರಿ ಅಮಾವಾಸ್ಯೆ ಬಳಿಕ ಹಾಗೂ ಹೋಳಿ ಹುಣ್ಣಿಮೆಗೂ ಮುನ್ನ 3,5,9,11ನೇ ದಿನದಂದು ಬರುವ ಒಂದು ಮಂಗಳವಾರ ಸಿಡಿಬಂಡಿ ಉತ್ಸವ ಆಯೋಜಿಸಲಾಗುತ್ತದೆ. ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರದಿಂದಲೂ ಭಕ್ತರು ಸಿಡಿಬಂಡಿ ಉತ್ಸವಕ್ಕೆ ಬರುತ್ತಾರೆ. ಉತ್ಸವದ ದಿನ ಕನಕ ದುರ್ಗಮ್ಮ ದೇವಿಯನ್ನು ಚಿನ್ನಾಭರಣಗಳಿಂದ ಅಲಂಕರಿಸಲಾಗುತ್ತದೆ.

ಎಲ್‌ಸಿಡಿ ಪರದೆ, ಉಚಿತ ಬಸ್ ಸೇವೆ: ಗ್ರಾಮೀಣ ಪ್ರದೇಶದ ಭಕ್ತರ ಅನುಕೂಲಕ್ಕಾಗಿ ಮಾ.3ರಂದು ಉಚಿತ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. 30 ಬಸ್‌ಗಳು ಬೆಳಗ್ಗೆ 11ರಿಂದ ರಾತ್ರಿ 11ರವರೆಗೆ ನಗರದಿಂದ ವಿವಿಧ ಮಾರ್ಗಗಳಲ್ಲಿ ಸಂಚರಿಸಲಿವೆ. ಸಿಡಿಬಂಡಿ ಉತ್ಸವವನ್ನು ನೋಡುವುದಕ್ಕಾಗಿ ಅಂಡರ್‌ಪಾಸ್, ಮೋಕಾ, ಕಪ್ಪಗಲ್ಲು ಹಾಗೂ ತಾಳೂರು ರಸ್ತೆಯಲ್ಲಿ ಎಲ್‌ಸಿಡಿ ಪರದೆಗಳನ್ನು ಅಳವಡಿಸಲಾಗುತ್ತಿದೆ. ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದರಿಂದ ಬುಧವಾರ ದೇವಸ್ಥಾನದ ಆವರಣದಲ್ಲಿ ಶ್ವಾನದಳದಿಂದ ತಪಾಸಣೆ ನಡೆಸಲಾಯಿತು.

ದೇವಸ್ಥಾನ ಅಭಿವೃದ್ಧಿಯ ಕಲ್ಪನೆ ಸಾಕಾರಗೊಳ್ಳುತ್ತಿದೆ. ಮೈಸೂರು ದಸರಾ ಮಾದರಿಯಲ್ಲಿ ನವರಾತ್ರಿ ಆಚರಣೆಯ ಚಿಂತನೆ ಇದೆ. ಇದಕ್ಕಾಗಿ ಸರ್ಕಾರ ಅನುದಾನ ನೀಡಿದರೆ ಅನುಕೂಲ ಆಗಲಿದೆ. ದೇವಸ್ಥಾನದ ಕಲಶಾರೋಹಣ ಕಾರ್ಯಕ್ರಮವನ್ನು ಒಂದು ವಾರ ವಿಜೃಂಭಣೆಯಿಂದ ಆಚರಿಸಲಾಗುವುದು. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ 101 ಸ್ವಾಮೀಜಿಗಳನ್ನು ಆಹ್ವಾನಿಸಲು ಚಿಂತನೆ ನಡೆದಿದೆ.| ಪಿ.ಗಾದೆಪ್ಪ ಕನಕ ದುರ್ಗಮ್ಮ ದೇವಸ್ಥಾನದ ಪ್ರಧಾನ ಧರ್ಮಕರ್ತ