ಜಿಲ್ಲೆ

ಭೇಟಿಗೆ ರಾಜಕೀಯ ಲೇಪನ ಬೇಡ

ಲಕ್ಷ್ಮೇಶ್ವರ: ರಾಜ್ಯದ ಎಲ್ಲ ಮಠಮಾನ್ಯಗಳ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅಪಾರ ಗೌರವವಿಟ್ಟುಕೊಂಡಿದ್ದಾರೆ. ಹೀಗಾಗಿ ಅವರ ಭೇಟಿ ಕೇವಲ ದರ್ಶನಾಶೀರ್ವಾದದ ಭೇಟಿ ಆಗಿದೆ. ಇದಕ್ಕೆ ಯಾವುದೇ ರಾಜಕೀಯ ಲೇಪನ ಬೇಡ ಎಂದು ಬಾಲೇಹೊಸೂರಿನ ಶ್ರೀದಿಂಗಾಲೇಶ್ವರ ಸ್ವಾಮೀಜಿ ಸ್ಪಷ್ಟಪಡಿಸಿದರು.

ಶುಕ್ರವಾರ ಮಠದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಶ್ರೀಗಳು, ‘ನಮ್ಮ ಮಠಕ್ಕೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಲ್ಲ ಪಕ್ಷದ ನಾಯಕರೂ ಬರುತ್ತಾರೆ. ನಾವೂ ಎಲ್ಲ ಪಕ್ಷದವರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದೇವೆ. ವೀರಶೈವ-ಲಿಂಗಾಯತ ವಿಷಯದ ಬಗ್ಗೆ ಅವರು ರ್ಚಚಿಸಿಲ್ಲ. ಅದು ಈಗ ಮುಗಿದ ಅಧ್ಯಾಯ. ಧರ್ಮದ ವಿಷಯದಲ್ಲಿ ರಾಜಕೀಯ ಹಸ್ತಕ್ಷೇಪ ಆಗಬಾರದು. ಆದರೆ, ರಾಜಕಾರಣದಿಂದ ಧರ್ಮಕ್ಕೆ ಧಕ್ಕೆಯಾದಾಗ ಅದು ತಪ್ಪೆಂದು ಮತ್ತು ಅದನ್ನು ತಿದ್ದುವ ಕಾರ್ಯ ಮಠಾಧೀಶರದ್ದಾಗಿದೆ’ ಎಂದರು.

ಮೂರು ಸಾವಿರ ಮಠದ ವಿಷಯದ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ, ‘ಈ ವಿಷಯ ಈಗ ಅಪ್ರಸ್ತುತ. ಕಳೆದ 10 ತಿಂಗಳಿಂದ ನಾವು ತಮ್ಮ ಮಠದಲ್ಲಿ ಗೋಶಾಲೆ ನಿರ್ವಣ, ಮಠದ ಅಭಿವೃದ್ಧಿ ಕಾರ್ಯದಲ್ಲಿ ತಲ್ಲೀನರಾಗಿದ್ದೇವೆ. ಕರೊನಾ ವೈರಸ್​ನ ಭೀತಿ ಸಂಪೂರ್ಣ ಕಳೆದ ಮೇಲೆ ಮೂರು ಸಾವಿರ ಮಠದ ಸಮಸ್ಯೆಯೂ ಬಗೆಹರಿಯಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ ಅಗಡಿ ಮತ್ತು ಕುಂಟೋಜಿ ಮಠದ ಶ್ರೀಗಳು, ನಾಗರಾಜ ಛಬ್ಬಿ, ಯು.ಎನ್. ಹೊಳಲಾಪೂರ, ಸುಜಾತಾ ದೊಡ್ಡಮನಿ, ಜಯಕ್ಕ ಕಳ್ಳಿ, ಡಿ.ಕೆ. ಹೊನ್ನಪ್ಪನವರ, ಮಂಜುನಾಥ ಘಂಟಿ, ಬಸಣ್ಣ ಓದುನವರ, ವೀರೂಪಾಕ್ಷ ನಂದೆಣ್ಣವರ, ನಿಂಗಪ್ಪ ಜಾಲವಾಡಗಿ, ಶಿವಣ್ಣ ಕಬ್ಬೇರ, ಯಲ್ಲಪ್ಪ ಸೂರಣಗಿ ಸೇರಿ ಅನೇಕರಿದ್ದರು.