ನ್ಯಾಮತಿ: ಬದುಕಿಗೆ ಸುಖ, ಶಾಂತಿಯ ಆದರ್ಶ ಮೌಲ್ಯಗಳ ಪರಿಪಾಲನೆ ಮುಖ್ಯ. ಮಾನವೀಯ ಸಂಬಂಧಗಳು ನಶಿಸುತ್ತಿರುವ ಸಂದರ್ಭದಲ್ಲಿ ಅರಿವು ಮೂಡಿಸಬೇಕಾದದ್ದು ಅವಶ್ಯಕ. ಸಂತೃಪ್ತಿ ಬದುಕಿಗಾಗಿ ಸಮೃದ್ಧ ಜೀವನಕ್ಕಾಗಿ ನಿಜವಾದ ಧರ್ಮಾಚರಣೆಯ ಅಗತ್ಯವಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಶ್ರೀ ಜಗದ್ಗುರು ಪ್ರಸನ್ನರೇಣುಕ ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ತಾಲೂಕಿನ ದೊಡ್ಡೆತ್ತಿನಹಳ್ಳಿ ಗ್ರಾಮದಲ್ಲಿ ಶ್ರೀ ಭದ್ರಕಾಳಿ ಸಮೇತ ಶ್ರೀ ವೀರಭದ್ರ ಸ್ವಾಮಿ ಮೊದಲ್ಗೊಂಡು ಹಲವಾರು ಪರಿವಾರ ದೇವತೆಗಳ ಪ್ರತಿಷ್ಠಾಪನಾ ಅಂಗವಾಗಿ ಜರುಗಿದ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಭೌತಿಕ ಜೀವನ ಸಮೃದ್ಧಗೊಂಡಂತೆ ಆಂತರಿಕ ಜೀವನ ಪರಿಶುದ್ಧಗೊಳ್ಳಬೇಕಾಗಿದೆ. ಸುಖದ ಬದುಕಿಗೆ ಸಂಪತ್ತಷ್ಟೇ ಮುಖ್ಯವಲ್ಲ. ಜತೆಗೆ ಧರ್ಮ ಪ್ರಜ್ಞೆ ಮತ್ತು ಸದಾಚಾರ ಸಂಸ್ಕೃತಿ ಬೆಳೆಯಬೇಕಾಗಿದೆ. ಬೆಳಕಿನಲ್ಲಿ ಬೆಳಕಿಗೆ ಬೆಲೆಯಿಲ್ಲದೇ ಇರಬಹುದು. ಆದರೆ ಕತ್ತಲೆಯಲ್ಲಿ ಕಿರು ದೀಪಕ್ಕೂ ಹಿರಿದಾದ ಬೆಲೆಯುಂಟು. ನೀತಿ ನಿಯಮಗಳಿಲ್ಲದೇ ಸಮಾಜದ ಅಭಿವೃದ್ಧಿ ಸಾಧ್ಯವಿಲ್ಲ. ಸಕಲ ಜೀವಾತ್ಮರಿಗೆ ಒಳಿತನ್ನೇ ಬಯಸಿದ ವೀರಶೈವ ಧರ್ಮ ಸರ್ವರ ಬಾಳಿಗೆ ಅಧ್ಯಾತ್ಮ ದಾರಿ ತೋರಿ ಉಜ್ವಲ ಜೀವನಕ್ಕೆ ಸ್ಪೂರ್ತಿಯಾಗಿದೆ ಎಂದರು.
ದೊಡ್ಡೆತ್ತಿನಹಳ್ಳಿ ಗ್ರಾಮದಲ್ಲಿ ಸುಂದರ ವೀರಭದ್ರೇಶ್ವರ ಮೊದಲ್ಗೊಂಡು ಅನೇಕ ದೇವಾಲಯಗಳನ್ನು ನಿರ್ವಿುಸಿ ಲೋಕಾರ್ಪಣೆ ಮಾಡುತ್ತಿರುವ ತಮ್ಮೆಲ್ಲರ ಧರ್ಮ ನಿಷ್ಠೆ, ಶ್ರದ್ಧಾ ಮನೋಭಾವ ಕಂಡು ಸಂತೋಷವಾಗಿದೆ ಎಂದು ಶ್ಲಾಘಿಸಿದರು.
ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ್ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಾಗರಿಕತೆಯ ಹೆಸರಿನಲ್ಲಿ ಸಂಸ್ಕೃತಿ ನಾಶಗೊಳ್ಳಬಾರದು. ಧರ್ಮ ಮತ್ತು ಧರ್ವಚರಣೆ ಮರೆತರೆ ಅಪಾಯ ತಪ್ಪಿದ್ದಲ್ಲ. ಶ್ರೀ ಜಗದ್ಗುರು ರೇಣುಕಾಚಾರ್ಯರ ಜೀವನ ದರ್ಶನದ ಅಮೂಲ್ಯ ಸಂದೇಶ ಸರ್ವರ ಬಾಳಿಗೆ ದಾರಿದೀಪ ಎಂದು ತಿಳಿಸಿದರು.
ರಾಂಪುರ ಹಾಲಸ್ವಾಮಿ ಮಠದ ಶಿವಕುಮಾರ ಸ್ವಾಮೀಜಿ, ಗೋವಿನಕೋವಿ ವಿಶ್ವಾರಾಧ್ಯ ಮಹಲಿಂಗ ಹಾಲಸ್ವಾಮೀಜಿ, ಹೊಟ್ಯಾಪುರ ಓಂಕಾರಸ್ವಾಮೀಜಿ ಉಪಸ್ಥಿತರಿದ್ದರು.
ನ್ಯಾಮತಿ ಕೋಹಳ್ಳಿ ಹಿರೇಮಠದ ಎಸ್.ಕೆ. ವಿಶ್ವಾರಾಧ್ಯರು, ನ್ಯಾಮತಿ ಬಸವರಾಜ್ ಹೊಸಕಟ್ಟಿ, ದೊಡ್ಡೆತ್ತಿನಹಳ್ಳಿ ಗ್ರಾಮದ ಮುಖಂಡರು ಪಾಲ್ಗೊಂಡಿದ್ದರು.
ಸಮಾರಂಭಕ್ಕೂ ಮುನ್ನ ಬಾಳೆಹೊನ್ನೂರು ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಸಂಭ್ರಮದಿಂದ ಜರುಗಿತು. ಇಡೀ ಗ್ರಾಮಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಎಲ್ಲೆಡೆಯಲ್ಲಿ ಹಬ್ಬದ ವಾತಾವರಣ ನಿರ್ವಣಗೊಂಡಿತ್ತು.