ಜಿಲ್ಲೆ

ಬಾಳೆಹೊನ್ನೂರು ಜೇಸಿಐಗೆ ವಿವಿಧ ಪ್ರಶಸ್ತಿ

ಬಾಳೆಹೊನ್ನೂರು: ಪಟ್ಟಣದ ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆಗೆ ಈ ವರ್ಷದ ವಿವಿಧ ಉತ್ತಮ ಕಾರ್ಯಗಳಿಗಾಗಿ ಜೇಸಿ ವಲಯ 14ರಿಂದ ವಿವಿಧ ಪ್ರಶಸ್ತಿ ದೊರೆತಿದೆ ಎಂದು ಜೇಸಿ ಅಧ್ಯಕ್ಷ ಇಬ್ರಾಹಿಂ ಶಾಫಿ ತಿಳಿಸಿದರು.

ಕೊಪ್ಪದಲ್ಲಿ ನಡೆದ ಜೇಸಿಐ ಭಾರತ ವಲಯ 14ರ ಮಧ್ಯವಾರ್ಷಿಕ ಸಮ್ಮೇಳನದಲ್ಲಿ ಬಾಳೆಹೊನ್ನೂರು ಘಟಕವು ಈ ವರ್ಷ ನಡೆಸಿದ ವಿವಿಧ ಕಾರ್ಯಕ್ರಮಗಳಿಗಾಗಿ ಜೇಸಿ ವಲಯ ಉಪಾಧ್ಯಕ್ಷರು, ಜೇಸಿ ವಲಯ ನಿರ್ದೇಶಕರಿಂದ ಒಟ್ಟು 11 ವಿವಿಧ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. 2025ನೇ ಸಾಲಿನ ಅರ್ಧ ವರ್ಷದಲ್ಲಿ ಸ್ಥಳೀಯ ಮಟ್ಟದಲ್ಲಿ ಸಂಸ್ಥೆ ನೀಡಿರುವ ವಿವಿಧ ಸಮಾಜ ಸೇವಾ ಚಟುವಟಿಕೆಗಳನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ.

ಪ್ರಸಕ್ತ ಸಾಲಿನ ಇನ್ನುಳಿದ ಜೇಸಿ ಅರ್ಧ ವರ್ಷದಲ್ಲಿ ಸ್ಥಳೀಯ ಘಟಕ ಹಲವು ಕಾರ್ಯಕ್ರಮಗಳನ್ನು ಆಯೋಜಿಸುವ ಯೋಜನೆಯಲ್ಲಿದ್ದು, ಪ್ರಮುಖವಾಗಿ ಆರೋಗ್ಯ, ಕ್ರೀಡೆ, ಶಿಕ್ಷಣ ಕ್ಷೇತ್ರಗಳಲ್ಲಿ ವಿವಿಧ ಕಾರ್ಯಕ್ರಮ ನಡೆಸಲಾಗುವುದು. ಬಾಳೆಹೊನ್ನೂರು ಜೇಸಿ ಈ ವರ್ಷ ವಲಯದ ಅತ್ಯುತ್ತಮ ಘಟಕ, ಸಂಸ್ಥೆ ಕಾರ್ಯದರ್ಶಿ ವಿ.ಅಶೋಕ್‌ಗೆ ವಲಯದ ಉತ್ತಮ ಕಾರ್ಯದರ್ಶಿ ಪ್ರಶಸ್ತಿ ದೊರೆತಿದೆ.

ಮಧ್ಯವಾರ್ಷಿಕ ಸಮ್ಮೇಳನದಲ್ಲಿ ಜೇಸಿ ಕಾರ್ಯದರ್ಶಿ ವಿ.ಅಶೋಕ್, ಜೇಸಿಐ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಡಾ.ನವೀನ್ ಲಾಯ್ಡ ಮಿಸ್ಕಿತ್, ಪೂರ್ವಾಧ್ಯಕ್ಷ ಎನ್.ಶಶಿಧರ್, ಎಸ್.ಎಲ್.ಚೇತನ್, ಸುಧಾಕರ್, ಚೈತನ್ಯ ವೆಂಕಿ, ಶಾಹಿದ್ ಮತ್ತಿತರರು ಭಾಗವಹಿಸಿದ್ದರು.