ಕಳಸ: ಪುರಾಣ ಪ್ರಸಿದ್ಧ ಬಾಳೆಹೊಳೆ ಶ್ರೀ ಚನ್ನಕೇಶವ ಸ್ವಾಮಿ ರಥೋತ್ಸವ ಗುರುವಾರ ಸೀಮಿತ ಭಕ್ತರ ಸಮ್ಮುಖದಲ್ಲಿ ಸರಳವಾಗಿ ನೆರವೇರಿತು.
ಬುಧವಾರ ಗಣ ಹೋಮ, ಧ್ವಜಾರೋಹಣ ಮತ್ತು ದಿಂಡಿ ಉತ್ಸವದೊಂದಿಗೆ ಜಾತ್ರೆ ಆರಂಭವಾಗಿತ್ತು. ಗುರುವಾರ ಮಧ್ಯಾಹ್ನ ಶ್ರೀ ದೇವರ ಸುತ್ತು ಸೇವೆ ಮಂಗಳಾರತಿ ಮುಗಿದ ಬಳಿಕ ಸ್ವಾಮಿ ವಿಗ್ರಹವನ್ನು ಹೊತ್ತು ಮಂಗಳ ವಾದ್ಯ, ಛತ್ರಿ, ಚಾಮರಗಳೊಂದಿಗೆ ಸುತ್ತು ಸೇವೆ ನಡೆಸಲಾಯಿತು. ನಂತರ ಸಿಂಗಾರಗೊಂಡ ಬ್ರಹ್ಮರಥದಲ್ಲಿ ಇಟ್ಟು ಪೂಜಿಸಿ ರಥೋತ್ಸವ ನಡೆಸಲಾಯಿತು. ಭಕ್ತರು ಕಾಳುಮೆಣಸು, ಏಲಕ್ಕಿ, ಅಡಕೆ, ಕಾಫಿ ಬೀಜ ಮತ್ತಿತರ ಧಾನ್ಯಗಳನ್ನು ರಥಕ್ಕೆ ಎರಚಿ ಹರಕೆ ಸಲ್ಲಿಸಿದರು.
ಕಳಸ, ಸಂಸೆ, ಹೊರನಾಡು, ತಲಗೋಡು, ಬಸರೀಕಟ್ಟೆ, ಮುನ್ನೂರುಪಾಲ್, ಹಿರೇಬೈಲು, ಮಾವಿನ್ಕೆರೆ, ಕೆ.ಕೆಳಗೂರು ಮುಂತಾದೆಡೆಯಿಂದ ಭಕ್ತರು ಆಗಮಿಸಿ ಹಣ್ಣು-ಕಾಯಿ ಸಮರ್ಪಿಸಿದರು.
ಕರೊನಾ ಮಾರ್ಗಸೂಚಿ ಪಾಲನೆ ಕಡ್ಡಾಯವಾಗಿದ್ದ ಹಿನ್ನೆಲೆಯಲ್ಲಿ ಸಂತೆ ಮರುಕಟ್ಟೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸಲಾಗಿತ್ತು. ಅಂಗಡಿ ಮುಂಗಟ್ಟೆಗಳಿಗೂ ಅವಕಾಶವಿರಲಿಲ್ಲ.