ಉಡುಪಿ: ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ 52 ರ ಬಾಳೆಬರೆ ಘಾಟ್ ನಲ್ಲಿ ಕಾಂಕ್ರೀಟ್ ಪೇವ್ ಮೆಂಟ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಪ್ರಸ್ತುತ ಕಾಮಗಾರಿಯು ನಿರೀಕ್ಷಿತ ಪ್ರಗತಿಯಲ್ಲಿ ಸ್ವಲ್ಪ ವ್ಯತ್ಯಯವಾಗಿರುವುದರಿಂದ ಕಾಂಕ್ರೀಟ್ ಪೇವ್‌ಮೆಂಟ್‌ನ ಕ್ಯೂರಿಂಗ್ ಅವಧಿಗೆ ಏ.15ರವರೆಗೆ ಕಾಲಾವಕಾಶ ಅವಶ್ಯವಾಗಿರುವುದರಿಂದ ವಾಹನಗಳ ಸಂಚಾರ ನಿಷೇಧ ಆದೇಶವನ್ನು ಹೆಚ್ಚುವರಿ 10 ದಿವಸಗಳವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಅಧಿಸೂಚನೆ ಹೊರಡಿಸಿದ್ದಾರೆ.
ಫೆ. 5 ರಿಂದ ಏ. 5ರವರೆಗೆ ವಾಹನಗಳ ಸಂಚಾರ ನಿಷೇಧಿಸಲಾಗಿತ್ತು. ಇದನ್ನು ಹೆಚ್ಚುವರಿ 10 ದಿವಸಗಳವರೆಗೆ ವಿಸ್ತರಿಸಲಾಗಿದ್ದು, ಪರ್ಯಾಯ ಮಾರ್ಗದಲ್ಲಿ ಸಂಚಾರಕ್ಕೆ ಸೂಚನೆ ನೀಡಲಾಗಿದೆ.
ರಾಜ್ಯ ಹೆದ್ದಾರಿ-52 ರಿಂದ ತೀರ್ಥಹಳ್ಳಿ ಮೂಲಕ ಕುಂದಾಪುರ ಕಡೆ ಹೋಗುವ ಲಘು ವಾಹನಗಳು ತೀರ್ಥಹಳ್ಳಿ-ಹಾಲಾಡಿ-ಬಸ್ರೂರು-ಕುಂದಾಪುರ ರಸ್ತೆ ಹಾಗೂ ತೀರ್ಥಹಳ್ಳಿ-ಹೆಬ್ರಿ-ಉಡುಪಿ-ಕುಂದಾಪುರ ರಸ್ತೆಯಲ್ಲಿ, ತೀರ್ಥಹಳ್ಳಿ ಮೂಲಕ ಕುಂದಾಪುರ ಕಡೆಗೆ ಹೋಗುವ ಭಾರೀ ವಾಹನಗಳು ತೀರ್ಥಹಳ್ಳಿ-ಕಾನುಗೋಡು-ನಗರ-ಕೊಲ್ಲೂರು-ಕುಂದಾಪುರ ಮಾರ್ಗದಲ್ಲಿ, ತೀರ್ಥಹಳ್ಳಿ-ಯಡೂರು-ಹುಲಿಕಲ್-ಕುಂದಾಪುರ ಕಡೆ ಹೋಗುವ ಲಘು ಅಥವಾ ಭಾರಿ ವಾಹನಗಳು ತೀರ್ಥಹಳ್ಳಿ-ಯಡೂರು-ಮಾಸ್ತಿಕಟ್ಟೆ-ನಗರ-ಕೊಲ್ಲೂರು-ಕುಂದಾಪುರ ಮಾರ್ಗದಲ್ಲಿ, ಭಾರೀ ಸರಕು ವಾಹನಗಳು ಹೊಸನಗರ- ನಗರ- ಕೊಲ್ಲೂರು- ಕುಂದಾಪುರ ರಸ್ತೆಯಲ್ಲಿ ಸಂಚರಿಸಬೇಕು.