ಮೂಡುಬಿದಿರೆ (ದ.ಕ.): ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಕರ್ನಾಟಕ ಆಶ್ರಯದಲ್ಲಿ ಮಾ.2ರಿಂದ 6ರ ತನಕ ರಾಷ್ಟ್ರೀಯ ಸೀನಿಯರ್ ಬಾಲ್ ಬ್ಯಾಡ್ಮಿಂಟನ್ 67ನೇ ಟೂರ್ನಿ ವಿದ್ಯಾಗಿರಿ ಕ್ಯಾಂಪಸ್‌ನಲ್ಲಿ ನಡೆಯಲಿದೆ.
ದೇಶದ 29 ರಾಜ್ಯಗಳು ಹಾಗೂ ಸಾರ್ವಜನಿಕ ವಲಯಗಳಿಂದ 700 ಕ್ರೀಡಾಪಟುಗಳು, 500 ಅಧಿಕಾರಿಗಳು ಪಾಲ್ಗೊಳ್ಳಲಿದ್ದು, ಎಂಟು ಅಂಗಣಗಳು ಸಜ್ಜಾಗಿವೆ ಎಂದು ಆಳ್ವಾಸ್ ವಿದ್ಯಾಸಂಸ್ಥೆ ಮುಖ್ಯಸ್ಥ ಡಾ.ಮೋಹನ ಆಳ್ವ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಟೂರ್ನಿಯಲ್ಲಿ ರಾಜ್ಯ ತಂಡಗಳಲ್ಲದೆ ಭಾರತೀಯ ರೈಲ್ವೇಸ್, ಮೇಜರ್ ಪೋರ್ಟ್ಸ್, ಕೆನರಾ ಬ್ಯಾಂಕ್, ಇಸ್ರೋ, ಡಿಎಇ ತಂಡಗಳು ಭಾಗವಹಿಸಲಿವೆ. ಇದು ರಾಷ್ಟ್ರದ ಅತ್ಯುನ್ನತ ಬಾಲ್ ಬ್ಯಾಡ್ಮಿಂಟನ್ ಟೂರ್ನಿ. ರಾಷ್ಟ್ರದ ಇತಿಹಾಸದಲ್ಲೇ ಮೊದಲ ಬಾರಿಗೆ ಫೈನಲ್ ಸಹಿತ ಪ್ರಮುಖ ಪಂದ್ಯಗಳನ್ನು ಒಳಾಂಗಣ ಹೊನಲು ಬೆಳಕಿನ ಕೃತಕ ಹುಲ್ಲುಹಾಸಿನ ಕ್ರೀಡಾಂಗಣದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ವೀಕ್ಷಕರಿಗೆ ಅನುಕೂಲವಾಗುವಂತೆ ಡಿಜಿಟಲ್ ಸ್ಟೋರಿಂಗ್ ವ್ಯವಸ್ಥೆ ಮಾಡಲಾಗಿದೆ. ದೇಶದ ಹೆಸರಾಂತ ಇಎಸ್‌ಐ ಕ್ರೀಡಾ ನೆಟ್‌ವರ್ಕ್ ಮಾಧ್ಯಮ ಪಂದ್ಯದ ನೇರಪ್ರಸಾರ ಮಾಡಲಿದೆ ಎಂದರು.
ಹೊನಲು ಬೆಳಕಿನಲ್ಲಿ ಫೈನಲ್ಸ್: ಮಾ.2ರಂದು ಸಾಯಂಕಾಲ 4.30ಕ್ಕೆ ವಿದ್ಯಾಗಿರಿ ಕ್ಯಾಂಪಸ್‌ನಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಟೂರ್ನಿ ಉದ್ಘಾಟಿಸುವರು. 3ರಂದು ಮುಂಜಾನೆಯಿಂದ ಪಂದ್ಯಗಳು ಆರಂಭ. 6ರಂದು ಸಾಯಂಕಾಲ 6.30ರ ನಂತರ ಆಳ್ವಾಸ್ ಪುತ್ತಿಗೆ ಕ್ಯಾಂಪಸ್‌ನ ಒಳಾಂಗಣ ಕ್ರೀಡಾಂಗಣದಲ್ಲಿ ಫೈನಲ್ ಹಾಗೂ ಸಮಾರೋಪ ನಡೆಯಲಿದೆ. ಟೂರ್ನಿಯಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸುವ ಬಾಲಕರ 10 ಮಂದಿಯ ತಂಡದಲ್ಲಿ ಏಳು ಮತ್ತು ಬಾಲಕಿಯರ ತಂಡದಲ್ಲಿ ಏಳು ಮಂದಿ ಆಳ್ವಾಸ್ ಶಿಕ್ಷಣ ಸಂಸ್ಥೆಯವರು ಎಂಬುದು ಹೆಮ್ಮೆಯ ವಿಷಯ ಎಂದು ಡಾ.ಆಳ್ವ ತಿಳಿಸಿದರು.