ಉಡುಪಿ: ಅಯೋಧ್ಯೆಯಲ್ಲಿ ಬಾಲರಾಮನಿಗೆ ಪ್ರಾಣ ಪ್ರತಿಷ್ಠಾ ಮಹೋತ್ಸವ ಹಾಗೂ ಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ, ಉಡುಪಿ ಕೃಷ್ಣ ಮಠದಲ್ಲಿ ಸೋಮವಾರ ಪಂಚ ರಥೋತ್ಸವ ಸೇವೆ ಸಮರ್ಪಿಸಲಾಯಿತು.
ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಕಿರಿಯ ಯತಿ ಸುಶ್ರೀಂದ್ರ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ರಥೋತ್ಸವ ಜರುಗಿತು. ಇದಕ್ಕೂ ಮೊದಲು ಮಠದ ಮಧ್ವ ಸರೋವರದಲ್ಲಿ ತೆಪ್ಪೋತ್ಸವ ಹಾಗೂ ದೀಪೋತ್ಸವ ಆಚರಿಸಲಾಯಿತು. ಸರೋವರದ ಸುತ್ತಲೂ ಹಚ್ಚಿದ್ದ ದೀಪಗಳ ಬೆಳಕಿನ ಪ್ರತಿಲನ ನೀರಿನಲ್ಲೂ ಕಂಡುಬಂದು, ಆ ದೃಶ್ಯ ನೋಡಲು ಮನಮೋಹಕವಾಗಿತ್ತು.
ಬಳಿಕ ದೇಗುಲದ ಮುಂಭಾಗದಿಂದ ಅಷ್ಟಮಠಗಳ ರಥಬೀದಿಯಲ್ಲಿ ಬ್ರಹ್ಮರಥ, ಮಹಾಪೂಜೆ ರಥ, ಬೆಳ್ಳಿರಥ, ಬಂಗಾರದ ರಥ ಹಾಗೂ ನವರತ್ನ ರಥಗಳ ತೇರಿನ ಉತ್ಸವ ಸಾವಿರಾರು ಭಕ್ತರ ಉಪಸ್ಥಿತಿಯಲ್ಲಿ ನೆರವೇರಿತು.