ಜಿಲ್ಲೆ

ಮೂಲಸೌಕರ್ಯ ವಂಚಿತ ಬಾಳಾಜಿ

reportermys

ಸಣ್ಣುವಂಡ ಕಿಶೋರ್ ನಾಚಪ್ಪ
ಮಡಿಕೇರಿ: ಬಾಳಾಜಿ ಗ್ರಾಮ ಸಾಕಷ್ಟು ಸಮಸ್ಯೆಗಳನ್ನು ಹೊದ್ದು ಮಲಗಿದೆ. ಕಿರಿದಾದ ಸಂಪರ್ಕ ರಸ್ತೆ, ನಿತ್ಯ ಕಾಡಾನೆ ಉಪಟಳ, ಹೊಳೆಯಲ್ಲಿ ಕಸದ ರಾಶಿ, ಮುಗಿಯದ ನಾಲೆ ಕಾಮಗಾರಿ, ಅರಣ್ಯ ಇಲಾಕೆಯಿಂದ ನಿರ್ಲಕ್ಷಿಸಲ್ಪಟ್ಟಿರುವ ದೇವರಕಾಡು, ಮೂಲ ಸೌಕರ್ಯಕ್ಕೆ ಆಗ್ರಹಿಸುತ್ತಿರುವ ದೇವರಕಾಡು ನಿವಾಸಿಗಳು.. ಹೀಗೆ ಸಮಸ್ಯೆಗಳ ಸುಳಿಯಿಂದ ಹೊರ ಬರಲು ಪರದಾಡುತ್ತಿದ್ದಾರೆ ಸ್ಥಳೀಯರು.


ಪೊನ್ನಂಪೇಟೆ ತಾಲೂಕಿನ ಮಾಯಮುಡಿ ಗ್ರಾಮ ಪಂಚಾಯಿತಿಗೆ ಒಳಪಡುವ ಈ ಗ್ರಾಮದಲ್ಲಿ ಮೂಲ ಸೌಕರ್ಯಕ್ಕೆ ಆಗ್ರಹಿಸುತ್ತಿದ್ದಾರೆ. ಕಾಡಾನೆ ಉಪಟಳ ಕೃಷಿಗೆ ಮಾರಕವಾಗುತ್ತಿದೆ. ಅರಣ್ಯ ಇಲಾಖೆ ಸೂಕ್ತ ಸ್ಪಂದನೆ ನೀಡದ ಕಾರಣ ರೈತರಿಗೆ ನಷ್ಟ ಹೆಚ್ಚಾಗುತ್ತಿದೆ. ಇರುವ ಬೆಳೆ ಉಳಿಸಿಕೊಳ್ಳುವುದು ಕಷ್ಟಕರವಾಗಿದೆ. ಮಾನಿಲ್ ಅಯ್ಯಪ್ಪ ದೇವರ ಕಾಡು ಒತ್ತಿನಲ್ಲಿರುವ ಗ್ರಾಮವಾಗಿರುವುದರಿಂದ ಕಾಡಾನೆ ಕಾಟ ಹೆಚ್ಚಿದೆ. ಬೆಳಗ್ಗೆ ಕೂಡ ಆನೆಗಳ ದರ್ಶನವಾಗುತ್ತದೆ. ಕಿರಿದಾದ ರಸ್ತೆಯಲ್ಲಿ ಆನೆಗಳು ಅಡ್ಡ ಬಂದಾಗ ಎತ್ತ ಓಡಲು ಆಗದೆ ಪರಿತಪಿಸಿದ ಘಟನೆ ಕೂಡ ನಡೆದಿದೆ. ತೋಟಗಳಲ್ಲಿ ಆನೆಗಳು ಬೀಡುಬಿಟ್ಟು, ಬಹುತೇಕ ಬೆಳೆಗಳನ್ನು ನಾಶ ಮಾಡುತ್ತಿವೆ.


ಕೀರೆ ಹೊಳೆ ದಂಡೆಯ ಬಲ ಭಾಗ ಪೊನ್ನಂಪೇಟೆ ಅರಣ್ಯ ವಲಯ, ಎಡಭಾಗ ತಿತಿಮತಿ ಅರಣ್ಯ ವಲಯಕ್ಕೆ ಸೇರುವುದರಿಂದ ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಸುವಾಗ ಹೊಳೆಯ ಬದಿ ದಾಟಿಸಿ ಕಾರ್ಯಾಚರಣೆಗೆ ಅಂತ್ಯ ಹಾಡಲಾಗುತ್ತದೆ. ನಮ್ಮ ವ್ಯಾಪ್ತಿಯಲ್ಲಿ ಆನೆಗಳಿಲ್ಲ ಎಂದು ಉಭಯ ವಲಯ ಅಧಿಕಾರಿಗಳು ವರದಿ ನೀಡಿ ಕೈಚೆಲ್ಲಿಕೊಳ್ಳುತ್ತಿದ್ದಾರೆ. ಬೆಳೆ ಕೈಸೇರುತ್ತಿಲ್ಲ.


ಕೀರೆ ಹೊಳೆಯಲ್ಲಿ ಬಾಟಲಿ, ಕಸ; ಗೋಣಿಕೊಪ್ಪ ಪಟ್ಟಣದಿಂದ ಹರಿದು ಹೋಗುವ ಕೀರೆ ಹೊಳೆ ಗ್ರಾಮದಲ್ಲಿ ಹರಿಯುತ್ತದೆ. ಪಟ್ಟಣದಲ್ಲಿ ಎಸೆಯುವ ಬಾಟಲಿ, ಪಾಸ್ಟಿಕ್, ಕಸ, ಪ್ಯಾಡ್ ಇಂತಹವುಗಳು ಗ್ರಾಮದ ಕೃಷಿ ಭುಮಿ ಸೇರುತ್ತದೆ. ಇದರಿಂದ ಗ್ರಾಮಸ್ಥರಿಗೆ ನೆಮ್ಮದಿ ಇಲ್ಲದಂತಾಗುತ್ತಿದೆ. ಬೇಸಿಗೆ ನಂತರ ದೊಡ್ಡ ಮಳೆ ಬಂದಾಗ ಹೊಳೆ ತುಂಬಿ ಗ್ರಾಮದ ಗದ್ದೆ, ತೋಟಗಳಿಗೆ ನುಗ್ಗುತ್ತದೆ. ಇದು ಅನೈರ್ಮಲ್ಯಕ್ಕೆ ಕಾರಣವಾಗಿದೆ.


ಸೊಳ್ಳೆ, ನೊಣ ಕಾಟ; ಮಡಿಕೆಬೀಡು ಎಂಬಲ್ಲಿ ಕೊಳಚೆ ಸಮಸ್ಯೆ ಹೆಚ್ಚಾಗಿದೆ. ಚರಂಡಿಯನ್ನು ಗ್ರಾಮ ಪಂಚಾಯಿತಿ ವತಿಯಿಂದ ಸ್ವಚ್ಚಗೊಳಿಸದ ಕಾರಣ ಸ್ಥಳೀಯ ನಿವಾಸಿಗಳು ಸೊಳ್ಳೆ, ನೊಣಗಳಿಂದ ಹೈರಾಣರಾಗಿದ್ದಾರೆ. ಸುಮಾರು ೧೦೦ ಕ್ಕೂ ಹೆಚ್ಚು ಕುಟುಂಬ ಇಲ್ಲಿ ಜೀವನ ಸಾಗಿಸುತ್ತಿದ್ದು, ಚರಂಡಿ ಕೊಳಚೆ ತೆಗೆಯಬೇಕಿದೆ. ಸೊಳ್ಳೆಗಳಿಂದ ಜನರು ಬೇಸರಗೊಂಡಿದ್ದಾರೆ. ರೋಗ-ರುಜಿನ ಹರಡುವ ಭೀತಿ ಇದೆ. ಬಸವೇಶ್ವರ ದೇವಸ್ಥಾನ ಸಮೀಪದ ಇಳಿಜಾರು ರಸ್ತೆ ವರ್ಷಂಪ್ರತಿ ಗುಂಡಿಮಯವಾಗಿರುವುದು ಸಮಸ್ಯೆಯಾಗಿದೆ. ನೀರು ಹರಿಯುವ ರಸ್ತೆಯಾಗಿರುವುದರಿಂದ ಎರಡು ಕಡೆ ಚರಂಡಿ, ಗುಣಮಟ್ಟದ ಕಾಂಕ್ರಿಟ್ ರಸ್ತೆ ನಿರ್ಮಿಸಿಕೊಡಿ ಎಂದು ಸ್ಥಳಿಯರು ಒತ್ತಾಯಿಸಿದ್ದಾರೆ.


ಸಂಪರ್ಕ ರಸ್ತೆ ಅಗಲೀಕರಣ ಮಾಡಿ; ಪೊನ್ನಂಪೇಟೆ-ಗೋಣಿಕೊಪ್ಪ ರಸ್ತೆಗೆ ಬಾಳಾಜಿ ಗ್ರಾಮದ ಮೂಲಕ ಸಂಪರ್ಕ ಕಲ್ಪಿಸುವ ರಸ್ತೆ ಅಗಲೀಕರಣವಾಗಬೇಕು ಎಂಬುವುದು ಸ್ಥಳೀಯರ ಒತ್ತಾಯವಾಗಿದೆ. ರಸ್ತೆ ಕೇವಲ ೧೫ ಅಡಿ ಅಗಲ ಇದೆ. ಇಲ್ಲಿ ೨ ವಾಹನಗಳು ಒಟ್ಟಿಗೆ ತೆರಳಲು ಆಗುತ್ತಿಲ್ಲ. ಸಂಪರ್ಕ ರಸ್ತೆಯಾಗಿರುವುದರಿಂದ ಸುಮಾರು ೨೦ ಅಡಿಗಳಷ್ಟು ವಿಸ್ತಿರಿಸಿದರೆ ಉತ್ತಮ. ಕಾಫಿ ಬೆಳೆಗಾರರು ಕೂಡ ರಸ್ತೆಗೆ ಬೇಕಾದ ಜಾಗ ಬಿಟ್ಟಿದ್ದಾರೆ. ಆದರೆ, ವಿಸ್ತರಣೆಗೊಂಡಿಲ್ಲ ಎನ್ನುತ್ತಾರೆ ಸ್ಥಳೀಯರು. ಹೆಚ್ಚು ವಾಹನ ಓಡಾಟವಿದೆ. ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುವುದು ಕಷ್ಟವಾಗಿದೆ. ಸ್ಥಳಿಯವಾಗಿ ಖಾಸಗಿ ರೆಸಾರ್ಟ್ ಇರುವುದರಿಂದ ದೊಡ್ಡ ವಾಹನಗಳು ಕೂಡ ಬರುತ್ತವೆ. ಇದರಿಂದ ರಸ್ತೆ ಬೇಗ ಕಿತ್ತು ಬರುತ್ತಿದೆ. ಸರ್ಕಾರ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ. ಈ ರಸ್ತೆಗೆ ವಿದ್ಯುತ್ ಕಂಬ ಜೋತು ನಿಂತಿದ್ದು, ಭಯ ಮೂಡಿಸಿದೆ.


ಮುಗಿಯದ ನಾಲೆ ಕಾಮಗಾರಿ; ಬ್ರಿಟಿಷ್ ಕಾಲದಲ್ಲಿ ನಿರ್ಮಿಸಿದ್ದ ಕೀರೆಹೊಳೆ ಎಡದಂಡೆ ನಾಲೆಯಲ್ಲಿ ನೀರು ಹರಿಯುತ್ತಿಲ್ಲ. ೨೫ ವರ್ಷದಿಂದ ಕಾಮಗಾರಿ ಮೊಟಕುಗೊಂಡು ಅರ್ಧಕ್ಕೆ ನಿಂತಿರುವುದರಿಂದ ತೊಂದರೆಯಾಗಿದೆ. ಆಗೊಮ್ಮೆ, ಈಗೊಮ್ಮೆ ಕಾಮಗಾರಿ ನಡೆಸಲಾಗುತ್ತದೆ. ಕೊಣಿಯಂಡ ನವೀನ್ ಎಂಬುವವರ ಗದ್ದೆವರೆಗೆ ಮಾತ್ರ ಹರಿಯುತ್ತದೆ. ನಂತರ ಕಾಳಪಂಡ ಕುಟುಂಬದ ಗದ್ದೆಗೆ ನೀರು ಹರಿಯುವುದಿಲ್ಲ. ಇದರಿಂದ ನೀರು ಮತ್ತೆ ಹಿಂದಕ್ಕೆ ಹರಿಯುತ್ತದೆ. ಇದು ಕೃಷಿಕರಿಗೆ ನಷ್ಟವನ್ನುಂಟು ಮಾಡುತ್ತಿದೆ. ಮಳೆಗಾಲದಲ್ಲಿ ಗದ್ದೆ ಪ್ರವಾಹದಿಂದ ಕೂಡಿರುತ್ತದೆ. ಮರಳು ನಿಂತು ಕೃಷಿಗೆ ಕಂಠಕವಾಗಿದೆ. ರೆಸಾರ್ಟ್ ಹತ್ತಿರ ನಾಲೆಗೆ ಬಾಟಲಿ, ಪ್ಲಾಸ್ಟಿಕ್ ಬಾಟಲಿ ಎಸೆಯುವುದರಿಂದ ಗದ್ದೆಗೆ ಸೇರುತ್ತಿವೆ. ಇದು ಸ್ಥಳಿಯರಿಗೆ ನುಂಗಲಾರದ ತುತ್ತಾಗಿದೆ.


ಪೈಪ್‌ಲೈನ್ ಇಲ್ಲ; ಬಾಳಾಜಿ ಗ್ರಾಮದ ಬಹುತೇಕ ಮನೆಗಳಿಗೆ ನೀರಿನ ವ್ಯವಸ್ಥೆ ಇಲ್ಲ. ಸ್ವಂತ ಬಾವಿ ತೋಡಿದ್ದಾರೆ. ಗ್ರಾಮ ಪಂಚಾಯಿತಿ ಪೈಪ್‌ಲೈನ್ ನಮಗೆ ಕಲ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಹೆಚ್ಚು ಜನನಿಬಿಡ ಪ್ರದೇಶಕ್ಕೆ ನೀರು ಕಲ್ಪಿಸಿ, ಇಡೀ ಗ್ರಾಮಕ್ಕೆ ನೀರು ಒದಗಿಸಲಾಗುತ್ತಿದೆ ಎಂದು ಪಂಚಾಯಿತಿ ತಪ್ಪು ಮಾಹಿತಿ ನೀಡುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ.


ಕೆರೆ ಸುತ್ತ ಕಾಡು; ಮಡಿಕೆಬೀಡು ಕೆರೆ ಸುತ್ತಲೂ ಗಿಡಗಂಟಿ ಬೆಳೆದು ಅನೈರ್ಮಲ್ಯದಿಂದ ಕೂಡಿದಂತಿದೆ. ನೀರು ಸ್ವಚ್ಚವಾಗಿಟ್ಟುಕೊಳ್ಳುವುದು, ಕಾಡು ಕಡಿದು ಸ್ವಚ್ಚ ಮಾಡುವುದರಿಂದ ಜನ-ಜಾನುವಾರುಗಳಿಗೂ ಉಪಕಾರವಾಗುತ್ತದೆ. ಬೋಟ್ ವ್ಯವಸ್ಥೆ ಮಾಡಿದರೆ ಪ್ರವಾಸಿಗರನ್ನು ಸೆಳೆಯಬಹುದು. ಸ್ಥಳೀಯವಾಗಿ ಹೋಂಸ್ಟೇ, ರೆಸಾರ್ಟ್ ಇರುವುದರಿಂದ ವಾಣಿಜ್ಯ ಕೇಂದ್ರವಾಗಿಯೂ ಮಾರ್ಪಡಿಸಿ ಎನ್ನುತ್ತಾರೆ ಸ್ಥಳೀಯರು.


ದೇವರಕಾಡು ಸಂರಕ್ಷಿಸಿ; ಗ್ರಾಮದಲ್ಲಿ ಹೆಚ್ಚು ವಿಸ್ತೀರ್ಣ ಹೊಂದಿರುವ (೬೧.೭೬ ಎಕರೆ) ಮಾನಿಲ್ ಅಯ್ಯಪ್ಪ ದೇವರಕಾಡು ಸಂರಕ್ಷಿಸಿ ಎಂದು ಮಾನಿಲ್ ಅಯ್ಯಪ್ಪ ಸೇವಾ ಸಮಿತಿ ಎರಡು ದಶಕಗಳಿಂದ ಕಾನೂನು ಹೋರಾಟ ನಡೆಸುತ್ತಿದೆ. ಸುಮಾರು ಅರಣ್ಯ ಪ್ರದೇಶ ಉತ್ತುವರಿಯಾಗಿದೆ. ಕಾಫಿ ತೋಟ, ಕೃಷಿ ಚಟುವಟಿಕೆ, ವಸತಿಗೂ ಬಳಕೆಯಾಗುತ್ತಿದೆ. ಕೇವಲ ೫-೬ ಎಕರೆ ಮಾತ್ರ ದೈವ ಪೂಜೆ ಮೀಸಲಾಗಿದೆ. ಜಲಮೂಲ, ಸಸ್ಯ ಸಂಪತ್ತು, ಜೀವ ಸಂಕುಲ ಉಳಿಯಬೇಕು. ಜಾಗತಿಕ ತಾಪಮಾನ ಕೂಡ ಸಮತೋಲನ ಕಾಪಾಡಿಕೊಳ್ಳಬೇಕು ಎಂದು ಹೋರಾಡುತ್ತಿದೆ. ಕಂದಾಯ ಇಲಾಕೆ ಸಪರ್ಧಿಯಲ್ಲಿದ್ದ ದೇವರಕಾಡು ಜಾಗವನ್ನು ೧೯೮೫ ರಲ್ಲಿ ವಿಶೇಷ ನಿಯಮ ರೂಪಿಸಿ ಅರಣ್ಯ ಇಲಾಕೆಗೆ ಸಂರಕ್ಷಣೆ ಚಿಂತನೆಯಲ್ಲಿ ನೀಡಿತ್ತು. ಸರ್ಕಾರದ ಜಾಗ ಎಂಬ ಕಾರಣಕ್ಕೆ ದೇವರಕಾಡು ಹಿನ್ನೆಲೆಗೆ ಅರಣ್ಯ ಇಲಾಖೆ ಕಾಳಜಿ ವಹಿಸದೆ ಇರುವುದರಿಂದ ಒತ್ತುವರಿಗೆ ಪ್ರಚೋದನೆ ನೀಡಿದಂತಾಗಿದೆ ಎಂಬ ಆರೋಪ ವ್ಯಕ್ತವಾಗಿದೆ. ಇಲ್ಲಿನ ನಿವಾಸಿಗಳು ನಮಗೆ ಮೂಲಭೂತ ಸೌಕರ್ಯ ಬೇಕು ಎಂದು ಹೋರಾಡುತ್ತಿದ್ದಾರೆ.

ನಮ್ಮ ವ್ಯಾಪ್ತಿಯಲ್ಲಿರುವ ಮನೆಗಳಿಗೂ ಪೈಪ್‌ಲೈನ್ ಮೂಲಕ ನೀರು ಸರಬರಾಜು ಮಾಡಿದರೆ ಸಾಕಷ್ಟು ಪ್ರಯೋಜನವಾಗಲಿದೆ. ೨-೩ ಕಡೆ ಮಾತ್ರ ಬಾವಿ ತೋಡಿರುವ ನಿದರ್ಶನಗಳಿವೆ. ಇದರ ಹೊರತು ನಿವಾಸಿಗಳೇ ಖರ್ಚು ಮಾಡಿ ನೀರಿನ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ಮಾಯಮುಡಿ ಗ್ರಾಮ ಪಂಚಾಯಿತಿ ಈ ಬಗ್ಗೆ ಗಮನ ಹರಿಸಲಿ.-ಕೊಣಿಯಂಡ ಸಂಜು ಸೋಮಯ್ಯ, ಕಾಫಿ ಬೆಳೆಗಾರ, ಬಾಳಾಜಿ ಗ್ರಾಮ
ಬಾಳೆಲೆ ರಸ್ತೆ ಮತ್ತು ಪೊನ್ನಂಪೇಟೆ, ಗೋಣಿಕೊಪ್ಪ ರಸ್ತೆಗಳಿಗೆ ಸಂಪರ್ಕಿಸುವ ರಸ್ತೆ ಕಾಯಕಲ್ಪ ಕಾಣಬೇಕಿದೆ. ಜಿಲ್ಲಾ ಪಂಚಾಯಿತಿ ಸಮಾನ್ಯ ಸಭೆಯಲ್ಲಿ ಸಾಕಷ್ಟು ಬಾರಿ ಗಮನ ಸೆಳೆದಿದ್ದೇನೆ. ಆದರೂ ಪ್ರಯೋಜನವಾಗಿಲ್ಲ. ಒಂದು ಕೋಟಿ ಬಿಡುಗಡೆಯಾಗಿದೆ ಎಂದು ಪಿಡಬ್ಲ್ಯೂಡಿ ಇಲಾಕೆ ಮತ್ತು ಪಂಚಾಯತ್‌ರಾಜ್ ಇಲಾಕೆ ಅಧಿಕಾರಿಗಳು ಪರಸ್ಪರ ಭರವಸೆ ನೀಡಿಕೊಂಡು ಜಾರಿಕೊಳ್ಳುತ್ತಿದ್ದಾರೆ. ಈ ರಸ್ತೆ ಅಗಲೀಕರಣವಾಗಬೇಕು.
ಬಾನಂಡ ಪ್ರತ್ಯು, ಜಿ. ಪಂ. ಮಾಜಿ ಸದಸ್ಯ
ಮಡಿಕೆಬೀಡು ಕೆರೆ ಸ್ವಚ್ಚತೆಗೆ ಆದ್ಯತೆ ನೀಡಬೇಕಿದೆ. ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ಸಂದರ್ಭ ಶವ ಇಟ್ಟು ವಿಧಿ-ವಿಧಾನ ಪೂರ್ಣಗೊಳಿಸಲು ಮಳೆಯಿಂದ ರಕ್ಷಣೆಗೆ ಶೆಡ್ ನಿರ್ಮಿಸಬೇಕು.
ಕೆ.ವೈ. ಅಶ್ವತ್, ಬಾಳಾಜಿ ಗ್ರಾಮಸ್ಥ
ಮಾಯಮುಡಿ ಬೋಡ್‌ನಮ್ಮೆ ಮೂಲ ಸ್ಥಾನ ಮಾನಿಲ್ ಅಯ್ಯಪ್ಪ ದೇವರಕಾಡಲ್ಲಿ ಅಯ್ಯಪ್ಪ, ಬೋಟೆಕರ್‌ಂಬ, ಭದ್ರಕಾಳಿಗೆ ಪೂಜೆ ಸಲ್ಲಿಸಿ ಆಚರಿಸುತ್ತೇವೆ. ದೈವ ಮೂಲ ಕೇಂದ್ರ ಅರಣ್ಯವಾಗಿ ಉಳಿಯಬೇಕು ಎಂಬುವುದು ನಮ್ಮ ಗುರಿಯಾಗಿದೆ. ಇದಕ್ಕಾಗಿ ೩ ದಶಕಗಳಿಂದ ಹೋರಾಡುತ್ತಿದ್ದೇವೆ.-ಸಣ್ಣುವಂಡ ವಿನು ವಿಶ್ವನಾಥ್, ಅಧ್ಯಕ್ಷರು, ಮಾನಿಲ್ ಅಯ್ಯಪ್ಪ ಸೇವಾ ಸಮಿತಿ