ಜಿಲ್ಲೆ

ಬಾಲಗೋಕುಲ ಸಮಿತಿಯಿಂದ ೧೬ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಠಮಿ

Mangaluru - Nishantha Narayana

ವಿಟ್ಲ: ಕ್ಷೇತ್ರ ಬಾಲಗೋಕುಲ ಸಮಿತಿಯಿಂದ ೧೬ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಠಮಿ ವಿವಿಧ ಕಾರ್ಯಕ್ರಮಗಳೊಂದಿಗೆ ಸೆ. ೬ರಂದು ವಿಠಲ ಪದವಿಪೂರ್ವ ಕಾಲೇಜಿನ ಸುವರ್ಣ ರಂಗಮಂದಿರದಲ್ಲಿ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ರಾಯರಬೆಟ್ಟು ವೀರಪ್ಪ ಗೌಡ ಹೇಳಿದರು.

ಬೆಳಗ್ಗೆ ೯.೩೦ ಕ್ಕೆ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಬಳಿಯಿಂದ ವಿಟ್ಲದ ಪ್ರಮುಖ ರಸ್ತೆಗಳ ಮೂಲಕ ವಿಠಲ ಪದವಿ ಪೂರ್ವ ಕಾಲೇಜಿನ ತನಕ ಶ್ರೀಕೃಷ್ಣ ವೇಷಧಾರಿ ಮಕ್ಕಳ ಶೋಭಾಯಾತ್ರೆ ನಡೆಯಲಿದೆ. ಧಾರ್ಮಿಕ ಸಭೆಯ ಉದ್ಘಾಟನೆಯನ್ನು ಹಿರಿಯ ಸ್ವಯಂಸೇವಕ ಚಂದಳಿಕೆ ರಾಮಪ್ಪ ಭಂಡಾರಿ ನಡೆಸಲಿದ್ದು, ಇಡ್ಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬೀಡಿನಮಜಲು ಸುಧಾಕರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಮಾಜಿಕ ಕಾರ್ಯಕರ್ತ ಲೋಕೇಶ್ ಜೋಡುಕಲ್ಲು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪಡ್ರೆ ರಕ್ಷಿತ್ ಶೆಟ್ಟಿ ನಿರ್ದೇಶನದ ಆರ್ ಕೆ. ಯಕ್ಷಗಾನ ಕಲಾ ಕೇಂದ್ರ ದ ವಿದ್ಯಾರ್ಥಿಗಳಿಂದ ಶ್ರೀಕೃಷ್ಣ ಲೀಲಾ ಮೃಗ ಪೌರಾಣಿಕ ಯಕ್ಷಗಾನ ನಡೆಯಲಿದೆ ಎಂದು ವಿಟ್ಲದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು.

ಪ್ರಧಾನ ಕಾರ್ಯದರ್ಶಿ ರವಿಶಂಕರ್, ಗೌರವಾಧ್ಯಕ್ಷ ಜಯರಾಮ ಬಲ್ಲಾಳ್, ಸಮಿತಿ ನಿಕಟಪೂರ್ವ ಅಧ್ಯಕ್ಷ ಸಿ. ಎಚ್. ಹರೀಶ್, ಜಗದೀಶ್ ಪಾಣೆಮಜಲು ಉಪಸ್ಥಿತರಿದ್ದರು.