ವಿಟ್ಲ: ವಿಶ್ವಹಿಂದು ಪರಿಷತ್ ಷಷ್ಠಿ ಪೂರ್ತಿ ಆಚರಣೆ ಸಮಿತಿ ವಿಟ್ಲ ಪ್ರಖಂಡ ಮತ್ತು ಬಾಲಗೋಕುಲ ಸಮಿತಿ ವತಿಯಿಂದ ೧೭ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಶ್ರೀ ವಿದ್ಯಾಗೋಪಾಲ ಹವನ ಆ.೨೫ರಂದು ವಿಟ್ಲದಲ್ಲಿ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ದೇವಿ ಪ್ರಸಾದ ಶೆಟ್ಟಿ ಬೆಂಞಿತ್ತಿಮಾರ್ ಹೇಳಿದರು.
ಶ್ರೀ ವಿದ್ಯಾ ಗೋಪಾಲ ಹವನ ಬೆಳಿಗ್ಗೆ ೭.೩೦ಕ್ಕೆ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪಂಚಲಿಂಗೇಶ್ವರ ಸದನದಲ್ಲಿ ಹಾಗೂ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣೆ ಸಭಾ ಕಾರ್ಯಕ್ರಮ ವಿಠಲ ಪದವಿಪೂರ್ವ ಕಾಲೇಜಿನ ಸುವರ್ಣ ರಂಗಮಂದಿರದಲ್ಲಿ ಜರುಗಲಿದೆ. ಶ್ರೀ ವಿದ್ಯಾ ಗೋಪಾಲ ಹವನ ಉದಯೇಶ ಕೆದಿಲಾಯ ಪೌರೋಹಿತ್ಯದಲ್ಲಿ ಜರಗಲಿದ್ದು, ಕುಂಟಾರು ರವೀಶ್ ತಂತ್ರಿ ಉಪಸ್ಥಿತಿಯಲ್ಲಿ ಪೂರ್ಣಾಹುತಿ ಜರಗಲಿದೆ. ೯.೩೦ಕ್ಕೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಿಂದ ಹೊರಡುವ ಶೋಭಾಯಾತ್ರೆಗೆ ಸಾಮಾಜಿಕ ಕಾರ್ಯಕರ್ತ ಕುಂಡಕೋಳಿ ರಾಜೀವ್ ಭಂಡಾರಿ ಚಾಲನೆ ನೀಡುವರು. ಕುದ್ದುಪದವು ದಿವ್ಯ ಶಕ್ತಿ ಮಕ್ಕಳ ಕುಣಿತ ಭಜನೆ ತಂಡದಿಂದ ಭಜನೆ ಜರಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
೧೧ ಗಂಟೆಗೆ ನಡೆಯುವ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ವಿಟ್ಲ ಗ್ರಾಮೀಣ ಬ್ಯಾಂಕ್ ನಿರ್ದೇಶಕ ಮನೋರಂಜನ್ ಕರೈ ವಹಿಸಲಿದ್ದಾರೆ. ಹಿರಿಯ ಸ್ವಯಂಸೇವಕ ತನಿಯಪ್ಪ ಮೂಲ್ಯ ದೀಪ ಬೆಳಗಿಸುವರು. ವಿಶ್ವಹಿಂದು ಪರಿಷತ್ ಮಂಗಳೂರು ವಿಭಾಗ ಪ್ರಧಾನ ಕಾರ್ಯದರ್ಶಿ ದೇವಿಪ್ರಸಾದ ಶೆಟ್ಟಿ ಮುಖ್ಯ ಭಾಷಣ ಮಾಡಲಿದ್ದಾರೆ. ಕೃಷಿ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕೆ.ಜಿ. ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು ಉಪನ್ಯಾಸಕಿ, ಕಲಾವಿದೆ ವಸುಧಾ ಶುಭಾಶಂಸನೆ ಮಾಡಲಿದ್ದಾರೆ. ರಾಜೇಶ್ ಮಳಿ ಅವರಿಂದ ಜಾದೂ ಪ್ರದರ್ಶನ ಮತ್ತು ಬಾಲಗೋಕುಲದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ ಎಂದರು.
ಸಮಿತಿಯ ಗೌರವಾಧ್ಯಕ್ಷ ಶ್ರೀಕಂಠ ವರ್ಮ, ಜಿಲ್ಲಾ ಪ್ರಮುಖ್ ಪದ್ಮನಾಭ ಕಟ್ಟೆ, ಉಪಾಧ್ಯಕ್ಷ ಈಶ್ವರ ಡಿ. ಕೂಜಪ್ಪಾಡಿ, ಪೂರ್ವಾಧ್ಯಕ್ಷ ಜಗದೀಶ್ ಪಾಣೆಮಜಲು ಉಪಸ್ಥಿತರಿದ್ದರು.