ಜಿಲ್ಲೆ

ಶತಮಾನದ ಬಾಲಬೋಧಿನಿ ಶಾಲೆ ಉಳಿಸಿದ ಬಡಮಕ್ಕಳು!

Mysuru

ಮಂಜುನಾಥ ಟಿ.ಭೋವಿ ಮೈಸೂರು
2, 8, 3, 1, 5, 9, 11...!
ಇದು ಯಾವುದೇ ಲಾಟರಿ ಸಂಖ್ಯೆಯಲ್ಲ. ಕ್ರಮವಾಗಿ 1ರಿಂದ 7ನೇ ತರಗತಿವರೆಗೆ ಓದುತ್ತಿರುವ ಮಕ್ಕಳ ಸಂಖ್ಯೆ!
ಇದನ್ನು ನೋಡಿದರೆ ನಿಮಗೆ ಆಶ್ಚರ್ಯವಾಗುತ್ತದೆ ಅಲ್ವೇ? ಆದರೇನು ಮಾಡುವುದು, ಇದು ವಾಸ್ತವ. ಚಾಮುಂಡಿಪುರಂನಲ್ಲಿರುವ ಸರ್ಕಾರಿ ವಿ.ಎಂ.ವಿ.ಬಾಲಬೋಧಿನಿ ಹಿರಿಯ ಪ್ರಾಥಮಿಕ ಶಾಲೆಯ ಶೋಚನೀಯ ಸ್ಥಿತಿಯನ್ನು ಈ ಅಂಕಿ-ಸಂಖ್ಯೆಗಳು ಸೂಚ್ಯವಾಗಿ ತೆರೆದಿಡುತ್ತವೆ. 125 ವರ್ಷಗಳ ಸುದೀರ್ಘ ಚರಿತ್ರೆ ಹೊಂದಿರುವ ಈ ಜ್ಞಾನ ದೇಗುಲ ಇದೀಗ ಮಕ್ಕಳ ಕೊರತೆಯಿಂದ ಏದುಸಿರು ಬಿಡುತ್ತಿದೆ. ತಕ್ಕಮಟ್ಟಿಗೆ ಈ ಶಾಲೆಯನ್ನು ಉಳಿಕೊಳ್ಳುವ ಕಾಯಕ ನಡೆದಿದೆ. ಆದರಿದು ಬರಿ ತಾತ್ಕಾಲಿಕ ಅಷ್ಟೇ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಈ ಶಾಲೆ ಮುಚ್ಚುವ ಭೀತಿ ಎದುರಾಗಲಿದೆ. ಆಗ ಹೋರಾಟ ಮಾಡುವ ಬದಲು, ಈಗಲೇ ತ್ವರಿತಗತಿಯಲ್ಲಿ ಜೀವ ತುಂಬುವ ಕೆಲಸವನ್ನು ಸರ್ಕಾರ, ಜನಪ್ರತಿನಿಧಿಗಳು ಮತ್ತು ಶಿಕ್ಷಣ ಇಲಾಖೆ ಮಾಡಬೇಕಿದೆ.
ತಾತಯ್ಯನ ಕೊಡುಗೆ: ಈ ಶಾಲೆ ವೃದ್ಧ ಪಿತಾಮಹ, ದಯಾಸಾಗರ ಎಂ.ವೆಂಕಟಕೃಷ್ಣಯ್ಯ (ತಾತಯ್ಯ) ಅವರ ಕೊಡುಗೆ. ಇವರು ಮೈಸೂರಿನಲ್ಲಿ ಅನೇಕ ಶಾಲೆಗಳ ಬೆಳವಣಿಗೆಗೆ ನೆರವಾಗಿದ್ದವರು. ಶಾರದಾ ವಿಲಾಸ ಸ್ಕೂಲ್, ಆರ್ಯ ಬಾಲಿಕಾ ಪಾಠಶಾಲೆ, ಸದ್ವಿದ್ಯಾ ಶಾಲೆ, ದಳವಾಯಿ ಮಾಧ್ಯಮಿಕ ಶಾಲೆ, ಕೈಗಾರಿಕಾ ಶಾಲೆ, ಚಾಮರಾಜೇಂದ್ರ ಟಿಕ್ನಿಕಲ್ ಇನ್‌ಸ್ಟಿಟ್ಯೂಟ್, ಕುರುಡು-ಕಿವುಡು-ಮೂಗರ ಶಾಲೆ... ಇವೆಲ್ಲ ಸ್ಥಾಪನೆಯಾಗಲು ತಾತಯ್ಯ ಅವರ ಶ್ರಮ ಕಾರಣ. ಅವರ ಇಂತಹ ಸಾಧನೆಯ ಸಾಲಿಗೆ ಬಾಲಬೋಧಿನಿ ಶಾಲೆಯೂ ಸೇರುತ್ತದೆ. ಆದರೆ, ಬಹಳಷ್ಟು ಜನರಿಗೆ ಈ ಸಂಗತಿ ಗೊತ್ತಿಲ್ಲ.
ಮಹಾತ್ಮ ಗಾಂಧೀಜಿ ಅವರು ತಾತಯ್ಯ ಅವರಿಗೆ ‘ಭೀಷ್ಮಾಚಾರ್ಯ’ ಎಂಬ ಬಿರುದು ನೀಡಿದ್ದರು. ಇದು ಅವರಿಬ್ಬರ ಒಡನಾಡಕ್ಕೆ ಸಾಕ್ಷಿ. ಮೈಸೂರಿಗೆ ಗಾಂಧೀಜಿ ಭೇಟಿ ನೀಡಿದ್ದಾಗ ರಾಜಮಹಾರಾಜರ ಊರಿನಲ್ಲಿ ಹೆಣ್ಣು ಮಕ್ಕಳಿಗಾಗಿ ಶಾಲೆ ಇಲ್ಲ ಎಂಬ ಸಂಗತಿ ಗೊತ್ತಾಯಿತು. ಆಗ ತಾತಯ್ಯ ಅವರ ಜತೆ ಈ ವಿಚಾರ ಚರ್ಚಿಸಿದ್ದರಂತೆ. ಗಾಂಧೀಜಿ ಅವರ ಮಾತಿಗೆ ಮಣಿದ ತಾತಯ್ಯ ತಾವು ವಾಸಿಸುತ್ತಿದ್ದ ಮನೆಯನ್ನೇ ಬಿಟ್ಟುಕೊಟ್ಟು, ಶಾಲೆ ತೆರೆಯಲು ಅವಕಾಶ ಮಾಡಿಕೊಟ್ಟರು. ಇದರ ಫಲವಾಗಿ 1896ರಲ್ಲಿ ಈ ದೇಗುಲ ಕಣ್ತೆರೆಯಿತು. ಇದು ಹೆಣ್ಣು ಮಕ್ಕಳಿಗಾಗಿಯೇ ಪ್ರಾರಂಭಗೊಂಡ ಶಾಲೆಯಾಗಿತ್ತು. ಕಾಲ ಕ್ರಮೇಣ ಇಲ್ಲಿ ಗಂಡು ಮಕ್ಕಳಿಗಳಿಗೂ ಪ್ರವೇಶ ಕಲ್ಪಿಸಲಾಯಿತು.
120*80 ಅಡಿ ಜಾಗದ ಈ ಶಾಲೆಯಲ್ಲಿ ಹಿಂದೆ ಸಾವಿರಾರು ವಿದ್ಯಾರ್ಥಿಗಳು ಓದುತ್ತಿದ್ದರು. ಆದರೀಗ ಮಕ್ಕಳ ಸಂಖ್ಯೆ 40ಕ್ಕೆ ಬಂದು ನಿಂತಿದೆ. ಯಾವುದೇ ತರಗತಿಯಲ್ಲೂ ಎರಡಂಕಿ ದಾಟುತ್ತಿಲ್ಲ. 1ನೇ ತರಗತಿಯಲ್ಲಿ 2, 2ನೇ ತರಗತಿಯಲ್ಲಿ 8, 3ನೇ ತರಗತಿಯಲ್ಲಿ 3, 4ನೇ ತರಗತಿಯಲ್ಲಿ 1, 5ನೇ ತರಗತಿಯಲ್ಲಿ 5, 6ನೇ ತರಗತಿಯಲ್ಲಿ 9 ಮತ್ತು 7ನೇ ಕ್ಲಾಸ್‌ನಲ್ಲಿ 11 ಮಕ್ಕಳು ಓದುತ್ತಿದ್ದಾರೆ.  8 ವರ್ಷಗಳ ಹಿಂದೆ 150 ಮಕ್ಕಳು ಪ್ರವೇಶ ಪಡೆದಿದ್ದರು. ಅಷ್ಟೂ ಹಾಜರಾತಿ ಈಗಿಲ್ಲ.
ಸುಶಿಕ್ಷಿತರು, ವಿದ್ಯಾವಂತರು ವಾಸ ಮಾಡುವ ಪ್ರದೇಶದಲ್ಲೇ ಈ ಶಾಲೆ ಇದೆ. ಆದರೆ, ದುರದೃಷ್ಟವೆಂದರೆ, ಈ ಪ್ರದೇಶದಿಂದ ಒಬ್ಬ ವಿದ್ಯಾರ್ಥಿಯೂ ಇಲ್ಲಿಗೆ ಬರಲ್ಲ. ಶಾಲೆ ಮನೆ ಬಾಗಿಲಿನಲ್ಲಿದ್ದರೂ ಯಾರೂ ತಮ್ಮ ಮಕ್ಕಳನ್ನು ಇಲ್ಲಿಗೆ ಕಳುಹಿಸುತ್ತಿಲ್ಲ. ಇವರೆಲ್ಲ ಕಾನ್ವೆಂಟ್ ಸ್ಕೂಲ್‌ಗೆ ತಮ್ಮ ಮಕ್ಕಳನ್ನು ಸೇರಿಸಿದ್ದಾರೆ. ಇದುವೇ ಪ್ರವೇಶಾತಿ ಕಡಿಮೆಯಾಗಲು ಮುಖ್ಯ ಕಾರಣ. ಸದ್ಯಕ್ಕೆ ಇಲ್ಲಿಗೆ ಬರುತ್ತಿರುವ ವಿದ್ಯಾರ್ಥಿಗಳೆಂದರೆ, ಜೆಪಿ ನಗರದ ಬಳಿ ಇರುವ ಮಹದೇವಪುರ ಮಕ್ಕಳು. ಇವರೆಲ್ಲ ಬಡ ಕುಟುಂಬದವರು. ಇವರಿಂದಲೇ ಈ ಶಾಲೆ ಇನ್ನೂ ನಡೆಯುತ್ತಿದೆ. ಈ ಮಕ್ಕಳೂ ಬರದಿದ್ದರೆ ಇಷ್ಟೊತ್ತಿಗೆ ಶಾಲೆಯನ್ನು ಮುಚ್ಚಬೇಕಾಗುತ್ತಿತ್ತು ಎಂಬುದು ನಗ್ನ ಸತ್ಯ. ಇಲ್ಲಿ ಕೂಡ ಸರ್ಕಾರಿ ಶಾಲೆಯನ್ನು ಉಳಿಸಲು ಬಡವರ ಮಕ್ಕಳೇ ನೆರವಾಗಿದ್ದಾರೆ ಎಂಬುದು ಗಮನಾರ್ಹ.
ಮಕ್ಕಳ ಕಲರವ ಇಲ್ಲ: ಜೆಎಲ್‌ಬಿ ರಸ್ತೆಗೆ ಹೊಂದಿಕೊಂಡಿರುವ ಈ ಶಾಲೆ ಆ ಸ್ಥಳದಲ್ಲಿ ಇದೆ ಎಂಬುದೇ ಬಹಳಷ್ಟು ಜನರಿಗೆ ಗೊತ್ತಿಲ್ಲ. ಆಳೆತ್ತರದ ಕಾಂಪೌಂಡ್ ಇರುವ ಶಾಲೆ ಪಾದಚಾರಿಗಳಿಗೆ ಅಷ್ಟಾಗಿ ಕಾಣುವುದಿಲ್ಲ. ಮಕ್ಕಳ ಕಲರವ, ಪಾಠ-ಪ್ರವಚನದ ಸದ್ದು ಗೋಚರವಾಗುವುದಿಲ್ಲ. ಅಷ್ಟರ ಮಟ್ಟಿಗೆ ಇಲ್ಲಿ ನಿಶಬ್ದ ಆವರಿಸಿರುತ್ತದೆ. ಚುನಾವಣೆ ಸಂದರ್ಭದಲ್ಲಿ ಇಲ್ಲಿ ಮತಗಟ್ಟೆ ತೆರೆದಾಗಲೇ ಇಲ್ಲೊಂದು ಶಾಲೆ ಇದೆ ಎಂಬುದು ಹೊರಗಿನವರಿಗೆ ಗೋಚರವಾಗುತ್ತದೆ.
ಈ ಶಾಲೆಯನ್ನು ಮಲ್ಲಿಗೆ ಸೇವಾ ಸಂಘ ದತ್ತು ಸ್ವೀಕರಿಸಿ ಪೋಷಿಸುತ್ತಿದೆ. ಮಕ್ಕಳಿಗೆ ಅಗತ್ಯ ಇರುವ ಸಮವಸ್ತ್ರ, ಪುಸ್ತಕಗಳು ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿದೆ. ಆದರೆ, ಇಲ್ಲಿಯ ಮಕ್ಕಳ ಪ್ರಮುಖ ಬೇಡಿಕೆಯಾದ ಸಾರಿಗೆ ಸೌಲಭ್ಯ ಒದಗಿಸುವುದು ಆಗುತ್ತಿಲ್ಲ.  ವ್ಯಾನ್ ಸೌಲಭ್ಯವಿದ್ದರೆ ಮಹದೇವಪುರದಿಂದ ಇನ್ನಷ್ಟು ಮಕ್ಕಳನ್ನು ಪಾಲಕರು ಕಳುಹಿಸಲು ಮನಸ್ಸು ಮಾಡಲಿದ್ದಾರೆ ಎಂದು ಶಿಕ್ಷಕಿ ಲತಾ ಕುಮಾರಿ ಹೇಳಿದರು.
ಇಬ್ಬರೇ ಶಿಕ್ಷಕಿಯರು : ಕನಿಷ್ಠ 7 ಶಿಕ್ಷಕರು ಇರಬೇಕಿದ್ದ ಇಲ್ಲಿ ಇಬ್ಬರು ಶಿಕ್ಷಕರು ಮಾತ್ರ ಇದ್ದಾರೆ. ಈ ಹಿಂದೆ 4 ಶಿಕ್ಷಕರಿದ್ದರು. ಈ ಸಂಖ್ಯೆ ಈಗ 2ಕ್ಕೆ ಇಳಿದಿದೆ. ಇರುವ ಇಬ್ಬರು ಶಿಕ್ಷಕರು ಎಲ್ಲ ವಿಷಯಗಳ ಬೋಧನೆಯೊಂದಿಗೆ ಶಾಲೆಯ ಇನ್ನಿತರ ಕೆಲಸಗಳನ್ನು ನಿರ್ವಹಣೆ ಮಾಡಬೇಕಿದೆ. 1ರಿಂದ 7ನೇ ತರಗತಿ ವರೆಗಿನ ಮಕ್ಕಳು ಒಂದೆಡೆ ಸೇರಿಸಿ ಪಾಠ ಮಾಡಲಾಗುತ್ತಿದೆ. ಹೀಗಾಗಿ, ಆಯಾ ತರಗತಿಯ ವಿಷಯ ಬೋಧನೆ ಕಷ್ಟಕರವಾಗಿದೆ.
ಕಪ್ಪು- ಬಿಳುಪಿನ ಚಿತ್ರಣ: ಶತಮಾನ ಕಂಡಿರುವ ಈ ಶಾಲೆಯನ್ನು ಒಳ ಪ್ರವೇಶಿಸಿದ ತಕ್ಷಣ ಹಳೇ ಮನೆ ಪ್ರವೇಶಿಸಿದಂತೆ ಭಾಸವಾಗುತ್ತಿದೆ. ಕಪ್ಪು-ಬಿಳುಪಿನ ಚಿತ್ರಣ ಕಣ್ಮುಂದೆ ಬರುತ್ತದೆ. ಕಟ್ಟಡ, ಪೀಠೋಪಕರಣಗಳು, ಗೋಡೆಗಳು, ಇಲ್ಲಿಯ ವಸ್ತುಗಳು ಮಾಸಿ ಬಡವಾಗಿವೆ. ಹೊಳಪು ಕಳೆದುಕೊಂಡಿರುವ ಕಟ್ಟಡ ಮಾತ್ರ ಈಗಲೂ ಸುಸ್ಥಿತಿಯಲ್ಲಿ ಇದೆ. ಆದರೆ, ಇದಕ್ಕೆ ಸುಣ್ಣಬಣ್ಣ ಬಳಿದು ಹೊಸರೂಪ ನೀಡಬೇಕಿದೆ.  ಛಾವಣಿ ಮೇಲೆ ಕಳೆ ಬೆಳೆದು ಮಳೆಗಾಲದಲ್ಲಿ ನೀರು ಒಳಗೆ ಜಿನುಗುತ್ತದೆ. ಇದನ್ನು ತಪ್ಪಿಸಲು ಸಮರ್ಪಕವಾಗಿ ನಿರ್ವಹಣೆ ಮಾಡಬೇಕಿದೆ. ಏಳು ಕೊಠಡಿ, ಮೈದಾನ, ಶೌಚಗೃಹವಿದೆ. ಇಲ್ಲಿಗೆ ಇನ್ನಷ್ಟು ಸೌಲಭ್ಯ ಕಲ್ಪಿಸಿ ಹೈಟೆಕ್ ಸ್ಪರ್ಶ ನೀಡುವ ಮೂಲಕ ಹೊಸ ಚೈತನ ತುಂಬಬೇಕಿದೆ.

ಸುತ್ತಲಿನ ಸ್ಥಳೀಯ ಮಕ್ಕಳು ಶಾಲೆಗೆ ಬರುತ್ತಿಲ್ಲ. ಪಾಲಕರನ್ನು ಗೋಗರೆದರೂ ತಮ್ಮ ಮಕ್ಕಳನ್ನು ಇಲ್ಲಿಗೆ ಕಳುಹಿಸುತ್ತಿಲ್ಲ. ಬದಲಿಗೆ ಕಾನ್ವೆಂಟ್ ಸ್ಕೂಲಿಗೆ ಕಳುಹಿಸಲು ಇಷ್ಟಪಡುತ್ತಿದ್ದಾರೆ. ಹೀಗಾಗಿ, ನಮ್ಮ ಶಾಲೆಗೆ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ.
 ಸಿ.ಜಯಂತಿ, ಪ್ರಭಾರ ಮುಖ್ಯ ಶಿಕ್ಷಕಿ, ಸರ್ಕಾರಿ ವಿ.ಎಂ.ವಿ.ಬಾಲಬೋಧಿನಿ ಹಿರಿಯ ಪ್ರಾಥಮಿಕ ಶಾಲೆ.

ಶಾಲೆಯನ್ನು ನಮ್ಮ ಸಂಘದಿಂದ ದತ್ತು ಸ್ವೀಕರಿಸಿ ಬಸ್ ಪಾಸ್ ಸೇರಿದಂತೆ ಕಂಪ್ಯೂಟರ್, ಟಿವಿ ಸೇರಿದಂತೆ ಕಲಿಕೆಗೆ ಬೇಕಾದ ಎಲ್ಲ ಸೌಲಭ್ಯವನ್ನೂ ಮಾಡಲಾಗುತ್ತಿದೆ. ನಿರೀಕ್ಷಿತ ಮಟ್ಟದಲ್ಲಿ ಮಕ್ಕಳ ಸಂಖ್ಯೆ ವೃದ್ಧಿಯಾಗುತ್ತಿಲ್ಲ. ಆರ್‌ಟಿಇ ಜಾರಿಯಾದ ಬಳಿಕ ಮಕ್ಕಳ ಸಂಖ್ಯೆ ಇಳಿಕೆಯಾಗಿದೆ.
 ಯು.ಜಿ.ಗೋಪಾಲರಾಜೇ ಅರಸ್, ಅಧ್ಯಕ್ಷ, ಮಲ್ಲಿಗೆ ಸೇವಾ ಸಂಘ